ಶನಿವಾರ, ನವೆಂಬರ್ 9, 2013

ಗುಲ್ಮೋಹರ್ ಮರದ ಕೆಂಪು ಹೂ ಬಣ್ಣ ನೋಡುತ್ತ ರಸ್ತೆ ಮಧ್ಯೆ ನಿಂತಿದ್ದೆ
ಕಳಚಿಕೊಂಡ ಕುತ್ತಿಗೆ ಸರದ ಕೊಂಡಿ ಕಚ್ಚುತ ಕೂತಿದ್ದೆ
ಪರೀಕ್ಷೆ ಬರೆವಾಗ ಬಿರಿಯಾನಿ ಜಗಿಯುವ ಬಗ್ಗೆ ಯೋಚಿಸುತ್ತಿದೆ
ನಿದ್ದೆಯಲ್ಲೂ ಬೆಚ್ಚಗೆ ಹೊದ್ದು ಮಲಗಿರುವ ಕನಸು ಕಾಣುತ್ತಿದ್ದೆ
ಎಲ್ಲೋ ಹೋಗಬೇಕಾದವಳು ಇನ್ನೆಲ್ಲಿಗೂ ಹೋಗಿ ಕಳೆದುಹೋಗುತ್ತಿದ್ದೆ
ಕಳೆದ ಪೆನ್ಸಿಲ್ನಿಂದಾಗಿ ಅದರ ಜಾತಿಯನ್ನೇ ಮುಟ್ಟದೆ ಕೋಪಗೊಳ್ಳತ್ತಿದೆ
ನೀನು..
ನಾವು ಭೇಟಿಯಾಗುವ ಬಗ್ಗೆ ನೆನಸಿಕೊಳ್ಳುತ್ತಿದೆ !!
16-10-2013(9.36 pm)
ಕಪ್ಪು ಕಂದಿಲು
1.
ದಾರಿಗಾಗಿ ಹಚ್ಚಿದ ಕಂದಿಲು
ಅದರ ಬೆಳಕಲ್ಲೇ
ಹಳದಿ ಮೈ ಬಿಸಾಡಿಕೊಂಡಿದೆ
ಬಂದು ಬಿಡು..
ಕಂದಿಲ ಕಪ್ಪ ಕಣ್ಣಿಗೆ ತೀಡಿ
ಹೆಬ್ಬೆರಳ ಮೇಲೆ ನಿಂತಿದ್ದೇನೆ
2
ಹಚ್ಚಿಬಿಟ್ಟೆ ಕಂದಿಲ...
ಹೆಚ್ಚು ಉರಿ ಮೈಯೊಳಗೆ
ಬೇಗೆ..
ಬೆರಳ ತುದಿ ಚಕ್ರಕ್ಕೆ ಬೇಕು
ನಿನ್ನದೇ
ಗಟ್ಟಿ ಎದೆಮೇಲಿನ ಕೂದಲು
ಎಣಿಸಲು..
ನೀ ಹಚ್ಚಿದ ಕಂದಿಲ ಬೆಳಕಲಿ
3.
ದೀರ್ಘವಾಗಿ ಒರಗಿಬಿಟ್ಟೆ
ರೆಡಾಕ್ಸೈಡ್ ನೆಲದ ಮೇಲೆ
ಭಾರವೆಲ್ಲಾ ಇಳಿಸುವಂತೆ
ಮಂದ ಬೆಳಕಾದರೇನು
ಬಿಟ್ಟು ಹೋಗಿಲ್ಲ
ನೀ ಹಚ್ಚಿದ ಕಂದಿಲ

-ಹರವು ಸ್ಫೂರ್ತಿಗೌಡ
17-1-2013(4.7am)
ಅರಳಿ ಅರಳಿ ಗಾಳಿಯೊಂದಿಗೆ ಬೆರತು ಬಂದೆ
ಬೀಸಿದೆಳೆಗಳಲ್ಲಿ ಈ ಗಂಧವತಿ ಕಂಪು ತೇಲಿ
ನಿನ್ನೊಡಲು ಸೇರಲು ಹರಿದೆ, ಮುಚ್ಚಿದ ಕಿಟಕಿಗಳು
ನನಗೂ ಗೊತಿತ್ತು, ನಿನಗೀಗ ನಿಲ್ಲಿಸಬೇಕು ಅನಿಸಿದೆ
ನಿಲ್ಲಿಸು...
3-10-13(7.41 pm)

ಭಾನುವಾರ, ಅಕ್ಟೋಬರ್ 20, 2013

ಬೆಸೆದ ಕೈಗಳು ಬೆಚ್ಚಗಾಗಿ ಹೋಗಿವೆ
ಬೆರಳುಗಳು ಉಬ್ಬಿ ಮತ್ತಷ್ಟು ಮೆತ್ತಗೆ
ತುಟಿಗೆ ಒತ್ತಿ ಬಂಧಿಸಿದೆ
ಬಿಸಿ ಉಸಿರಿಗೆ ತಣ್ಣಗೆ ನಡುಗುವ ಬೆರಳ ತುದಿಯ
ತಲೆಬಾಗಿ ಹಸ್ತದೊಳಗೆ ಮಡಚಿಕೊಂಡವು
ಬಿಡಿಸಿಕೊಳ್ಳಲಾಗಲಿಲ್ಲ, ಕೆಂಪಾದವು
ಹಿಡಿತಕ್ಕೆ ರಕ್ತವೆಲ್ಲಾ ಹಸ್ತಕ್ಕೆ ತುಂಬಿ
ರೇಖೆಗಳು ನಾಚಿ ಭವಿಷ್ಯ ಬರೆಯಲಿವೆ
ನನ್ನ-ನಿನ್ನ ತಬ್ಬಿದ ಕೈಗಳು ಈ ರಾತ್ರಿಯಲಿ
ಹೊಸ ಕನಸು ಕೊಡುವಂತೆ ಹೀಗೆ ಇರಲೆಂದು
-ಹರವು ಸ್ಫೂರ್ತಿಗೌಡ
11-10-2013(11.42 pm)
ತೊಯ್ದು ಬೆವರಿದ ನಾವು

ಜೋರು ಮಳೆ ಖುಷಿ
ನೆನೆದು
ನಿನ್ನೆದುರು ನಿಂತೆ
ನಾನು ತೊಯ್ದೆ
ನೀನು ಬೆವತೆ

-ಹರವು ಸ್ಫೂರ್ತಿಗೌಡ
(ಟೈಮು.....ನಿನ್ನದೇ ಸಂಜೆ)

ಶನಿವಾರ, ಅಕ್ಟೋಬರ್ 12, 2013

ಕ್ಷಮೀಸಲು ನಾನೇನು..

1.
ಬಿಗಿದು ಉಸಿರು ಹಿಡಿದಿಡಲಿಲ್ಲ
ಕ್ಷಣಗಳು ಅಲ್ಲೇ ನಿಲ್ಲಲು ಕಾದಿದ್ದೆ
ತಬ್ಬಿ ಕೋಪದ ಹಿಮ ಕರಗಿಸದೆ
ಕೊರೆವ ಪಾದಗಳಿಗೆ ಕಣ್ಣೊತ್ತಿ
ಬಿಸಿ ಕಣ್ಣೀರು ಹನಿಸಿ ಬಿಟ್ಟೆ
ತಲೆ ಎತ್ತಿ ನೋಡಲೇ ಇಲ್ಲ
ತೆರದುಕೊಂಡ ಕೈಗಳ
ತಬ್ಬಲು ಹಾತೋರೆದ ಹೃದಯವ
2.
ಮುತ್ತನಿಟ್ಟು ಜೋಗುಳ ಹಾಡಬೇಕಿತ್ತು
ನಿನ್ನದೇ ಕನಸು ಕಾಣುವ ಕಣ್ಣುಗಳಿಗೆ
ಕ್ಷಮೆ ಕೇಳಬಹುದಿತ್ತು
ನಿನ್ನ ಪ್ರೀತಿಯ ಮುಂದೆ
ಮುನಿಸು ಗಟ್ಟಿಯಾಗುತ್ತಿರಲ್ಲಿಲ್ಲ
3.
ಕೇಳಿದವರಿಗೆಲ್ಲ ನಗುವಿನ ಉತ್ತರ ಕೊಟ್ಟೆ
ನಾನು ಗಮನಿಸಿದೆ, ನಗುವೂ ತೀವ್ರವಾಗಿತ್ತು
ತುಸು ಹೆಚ್ಚು ಅನಿಸುವಷ್ಟು ತೀವ್ರತೆ!
ಕ್ಷಮಿಸಲಿಲ್ಲ ಅನ್ನುವುದೇ ನಿನ್ನ ದೂರು
ಕ್ಷಮಿಸಲು ನಾನೇನು?
4.
ಮಾತು ಮುಗಿಯೋದಿಲ್ಲ
ನಿಲ್ಲಿಸಬೇಕೆನಿಸಿದರೆ ನಿಲ್ಲಿಸು
ಮತ್ತೆ ಬದಲಾವಣೆಗಳಿಲ್ಲ ನನ್ನಲ್ಲಿ
ಹೊಸದಾಗಿ ನಿರಾಶೆಗೊಳ್ಳಲು
ಎಂದಿಗೂ ಕೈಗೆ ಸಿಗದ ಮೀನೇ
-ಹರವು ಸ್ಫೂರ್ತಿಗೌಡ

ಶುಕ್ರವಾರ, ಅಕ್ಟೋಬರ್ 4, 2013

ಮೈಮರೆವ ಪ್ರೀತಿ ತನ್ನನೇ ಮರೆಸಿತು ಶಕುಂತಳ
ಬೆರಳಿಗಿಟ್ಟ ಉಂಗುರ ಕಳೆದುಕೊಂಡರೆ ಮರೆತುಬಿಡುವುದೇ

ವಂಶೋಧರದ ಸಂಸ್ಕಾರಕ್ಕೆ ನಿಯೋಗದ ಪಾಂಡವರು
ಕುಂತಿಯ ಪಾವಿತ್ರ್ಯತೆ ಪ್ರಶ್ನಿಸಿದನ ಕೈಲಾಗದ ಪಾಂಡು

ಕಣ್ಣಿಗೆ ಬಿದ್ದ ಕಾಮ ಕಂಡು ಕಾಲ್ಲಾದಳೇ ಅಹಲ್ಯೆ
ಪುರುಷೋತ್ತಮನ ಕಾಲ್ಧೂಳು ಬೇಕಾಯಿತೇ ಕಲ್ಲಿಂದರಳಲು

ಎಂಜಲು ಹಣ್ಣು ನೈವೇದ್ಯ ಕೊಟ್ಟ ಭಕ್ತಿ ಕಂಡನೇ
ಕಾಣಲಿಲ್ಲ ರಾಮಗೆ ಕಾಯಿಸಿ ಹಣ್ಣಾಗಿಸಿದ ಶಬರಿಯ

ಆಯ್ಯೋ ಜಾನಕಿ ಕಥೆ ಕೇಳಬೇಡಿರಮ್ಮ ಭೂಗತವಾದಳು
ಏಕಪತ್ನಿವತ್ರಸ್ಥನಾಗಲು ಶಂಕಿಸಿ, ಸುಡಿಸಿ, ಮಣ್ಣುಮಾಡಿದ

ಇಂದಿಗೆ ಶಕುಂತಲ, ಕುಂತಿ, ಅಹಲ್ಯೆ, ಶಬರಿ, ಸೀತೆ ಬುದ್ಧಿವಂತೆಯರಾದರೇ?
ಹೆಣ್ಣ ಮಾಯೆಗೆ, ಅವಳ ವಾಂಛೆಗೆ ಬಲಿಯದೆ ಬದಲಾಗದವನಾದನೆ?

-ಹರವು ಸ್ಫೂರ್ತಿಗೌಡ
30-09-2013 (1.11pm)

ಶನಿವಾರ, ಸೆಪ್ಟೆಂಬರ್ 28, 2013

ಒಂದೊಂದು ಹುಚ್ಚು..

ಹುಚ್ಚರ ಸಂತೇಲಿ ಪ್ರೀತಿ ಹಂಬಲವು ಹುಚ್ಚೇ
ಎಲ್ಲರಲ್ಲಿ ಒಂದಾಗುವ ನನ್ನದು ಹುಚ್ಚೇ
ಗಿಡ ಬಳಿ ಮರ ಹಕ್ಕಿ-ಪಿಕ್ಕಿಗಳಿಗೂ ಹುಚ್ಚು
ವಿಜಯನಗರ ಸಿರಿ-ಹೊಯ್ಸಳ ಕಲೆಗೂ ಹುಚ್ಚು

ನದಿಯಾಗಿ ಒಡಲಲ್ಲಿ ಹರಿದೆ ದಾಹದ ಹುಚ್ಚಿಗೆ
ಕಥೆಯಾಗಿ ದೀಪಗಳಿಂದರಳಿದೆ ಕನಸಿನ ಹುಚ್ಚಿಗೆ
ಹಾಡಾಗಿ ಮೆರವಣಿಗೆ ಬಂದೆ ಅಮಲಿನ ಹುಚ್ಚಿಗೆ
ಬೆನ್ನಾಗಿ ಬಾಯಿಗೆ ಸಿಕ್ಕೆ ಕಚ್ಚುವ ಹುಚ್ಚಿಗೆ

ಹಂಬಲಿಸಿದವರು ಯಾರು ಸಿಗದ ಹುಚ್ಚು
ಹಂಬಲಿಸಿದ ಯಾರಿಗೂ ದೊರೆಯದ ಹುಚ್ಚು
ಕುದುರೆ ಏರಿ ಬರುವವನಿಗೆ ಮೀಸಲಾದ ಪ್ರಣದ ಹುಚ್ಚು
ಕಣ್ಣಲ್ಲಿ ಪ್ರೀತಿ ತುಂಬಿ ಕಾಡೋನೊಬ್ಬ
ನನ್ನ ಮೆಚ್ಚಿದ ಹುಚ್ಚರಲ್ಲಿ ಅವನು ಒಬ್ಬ
-ಹರವು ಸ್ಫೂರ್ತಿಗೌಡ
25-09-2013(8.55)

ಭಾನುವಾರ, ಸೆಪ್ಟೆಂಬರ್ 22, 2013

ಜೋಡಿಹಕ್ಕಿ
**************************
ಎದೆಯ ಒಳಗೆ ಕಾವು ಕೂತ ಬಾನುಲಿ
ಮೊಟ್ಟೆ ಒಡೆದ ಮಾರಿಯ ಕಣ್ಗೆ ಕಾಣಸಿಗದೆ ಹೋದೆ ನೀ

ಪ್ರೀತಿ ಹಸಿವಿಗೆ ಚಿವ್ ಗುಡುವ ಹಕ್ಕಿಮರಿ
ಬಾಯಿ ಬಿಟ್ಟ ಕೆಂಪು ಕೊಕ್ಕ ಮುದ್ದಿಸದೆ ಹೋದೆ ನೀ

ಬಾನ ತಾಕುವರೆಗೂ ಎಳೆದುಕೊಂಡು ಸ್ವರಗಳು
ನೆತ್ತಿ ನಿಲ್ಲದ ಕುತ್ತಿಗೆಯ ಬೆಂಬಲ ನಿಲ್ಲದೆ ಹೋದೆ ನೀ...

ಆಕಾಶಕ್ಕೆ ಕೈಚಾಚಿ ಕೂಗಿ ಬಿಳುವ ರೆಕ್ಕೆಗೆ
ಕೈ ಹಿಡುದು ಬಿಗಿದುಕೊ ಎದೆ ಬಿಸಿಬೆಚ್ಚಗೆ

ಪುಟ್ಟ ಪಾದ ತಡವರಿಸಿ ಪ್ರೀತಿ ಹುಡುಕಿದೆ
ಕೆರೆದು ಕೆರೆದು ಪ್ರೀತಿ ಸಿಗದೆ ಗೂಡು ತೂತು ಬಿದ್ದೆ

ಆನಾಥ ಹಕ್ಕಿಮರಿ ಅಣ್ಣಅಕ್ಕರಿಲ್ಲ ಗೂಡಲ್ಲೇ ಒಂಟಿ
ಹಾವು ನುಂಗುವ ಭಯಕೋ ಹೃದಯ ರಕ್ತ ಚಿಮ್ಮಿದೆ

ಮಳೆ ಗುಡುಗಿಗೆ ಹಾರಿ ತೇಲಿ ಮುಳುಗುತಿಹದು ಬದುಕ ಗೂಡು
ದಡಕ್ಕೆ ತುಂದು ಚಂಡಿ ಮರಿಯ ತಲೆವರೆಸಿ ಶಾಖ ನೀಡು

ನುಣುಪು ಮೈಗೆ ರೆಕ್ಕೆ ಮೂಡಲಿ ಗೆಳೆಯ
ಹುಳುವ ಹೆಕ್ಕಿ ತಂದು ಪ್ರೀತಿ ಗುಟುಕ ನೀಡು ಬಾ
ಸ್ವತಂತ್ರವಾಗಿ ರಕ್ಕೆ ಬಡಿದು ಹಾರಿ ಹಾರಿ ಜೋಡಿಹಕ್ಕಿಯಾಗುವ

-ಹರವು ಸ್ಫೂರ್ತಿಗೌಡ
18-09-2013 (7.40 am)
ಮುಗ್ಗಲು ಮಳೆ ಸುರಿವ ಗಮಲಿಗೆ ಗೆಳತಿ
ಮಗ್ಗಲು ಬದಲಿಸದೆ ನನ್ನ ತಬ್ಬಿ ಮಲಗೂತಿ
ನೇರಳೆ ಹಣ್ಣಿನ ನೆ(ನ)ಪಲ್ಲಿ ಗೆಳತಿ
ನಿನ್ನ ತುಟಿ ತಿನ್ನುವ ಆಸೆ ಪಕ್ಕಕ್ಕೆ ಬರುತಿ
-ಹರವು ಸ್ಫೂರ್ತಿಗೌಡ
ಸಾಯಬೇಕಾಗಿದೆ!
*****************
ಸಾವೇ ನೀನೆಷ್ಟು ಸರಳ-ನೆಮ್ಮದಿ
ನನ್ನನೊಮ್ಮೆ ಅಪ್ಪಿ ನಿನ್ನ ತೊಳಲ್ಲಿ ಬಂಧಿಸು
ನನ್ನಾತ್ಮ ನಿನ್ನಲಿ ಲೀನವಾಗಲಿ
ನಿನ್ನದೊಂದು ಸುಧೀರ್ಘ ಕತ್ತಲು
ಯಾರು ಕಾಣದೇ, ಏನೂ ಬಾರದೇ
ನಿಶಬ್ಧ ನಿಶ್ಚಲವಾಗಿರಲು ನಾನು-ನೀನು

ವಾಸ್ತವತೆಯ ಭೀಕರತೆಗಳು ಕಪ್ಪು ರಂಧ್ರದಲ್ಲಿ...
ಪ್ರೀತಿ-ಬದುಕು-ಸಾವು ಇವುಗಳ ಗ್ರಹಿಕೆ ಒಂದೇ
ಬದಕಿನಲ್ಲೂ ದೂರದಲ್ಲಲ್ಲೆಲೊ ಹೊಳೆಯುವುದೇ
ಒಮ್ಮೆ ಸತ್ತು ನೋಡಬೇಕು..!

-ಹರವು ಸ್ಫೂರ್ತಿಗೌಡ
20-09-2013(12.20pm)

ಶನಿವಾರ, ಸೆಪ್ಟೆಂಬರ್ 14, 2013

ಧರ್ಮ

ಅಚ್ಚಿನ ಮೊಳೆ ಖಾನೆಯಲ್ಲಿ ಸಿಕ್ಕಿ
ನಾನು ಹಿಂದೂ, ಕ್ರೈಸ್ತ, ಮುಸ್ಲೀಮನಾಗಿ
ವ್ಯಾಕರಣದ ವಿಭಕ್ತಿಗಳಷ್ಟೇ ನಿಸ್ಠೆಯಿಂದ
ಮಾರ್ಜಾಲ ಧರ್ಮಗಳನ್ನು ಪಾಲಿಸುತ್ತ

ಶೈಶವತನದಲ್ಲೇ ಮುಗ್ಧತೆ ಮುಗಿಸುವ ಧಾರ್ಮಿಕ ಪಾಠಗಳು
ಮೃದ್ವಸ್ಥಿ ಮೇಲೆ ನಕಾಶೆ ಬಿಡಿಸುವ ಕಲೆಯಂತೆ
ಧರ್ಮ ಉದ್ಘರಿಸುತ್ತಾ.. ಅಕಾರಾದಿಗಳಲ್ಲಿ
ಪ್ರಚೋದಿಸುತ್ತ, ಅರಳ ಬೇಯಿಸಿ ಕೈಯೆಣ್ಣೆ ಪಡೆ

ಕ್ರಿಸ್ತನ ಶತ್ರುವನ್ನು ಪ್ರೀತಿಸುವ ಕಲೆ ಕಲಿಯಲಿಲ್ಲ
ರಾಮನ ರಾಜ್ಯ ಪಾಲನೆ ಕಲಿಯದೆ ಭ್ರಷ್ಟರಾದಿರಿ
ಅಲ್ಲಾನ ಒಗಟ್ಟು ಕಲಿಯದೆ ಹೊಡೆದಾಡಿದಿರಿ
ಉಗ್ರ ಆಸೀಫ್​, ಕೋಮು ರಾಮ, ಪ್ರಚೋದಕ ಜೋಸೆಫ ಆದೆರೆಲ್ಲ

ಅಲ್ಲಾಹುವಿನ ರಾಸಯನಿಕ ದಹಿಸುತ್ತಿರುವ ದೇಶ ಉಳಿಸೆಂದೆ
ರಾಮನ ಮುಂದೆ ಸೀದು ಹೋದ ತ್ರಿಕರಣ ಶುದ್ಧಿಯ ಕೇಳಿದೆ
ಇಗರ್ಜಿ ಮುಂದೆ ಮುಂಬತ್ತಿ ಹಚ್ಚಿ ಕ್ರೈಸ್ತನ್ನನು ಎಳೆದಾಡಿದೆ
ಯಾವೊಬ್ಬ ದೇವನು ಉಸಿರಾಡಲಿಲ್ಲ
ಒಡೆದ ಹಡಗಿನಿಂದ ಜೀವಂತ ಉಳಿದವನಾದೆ

-ಹರವು ಸ್ಫೂರ್ತಿಗೌಡ
15-09-2013(4.14am)

ಶುಕ್ರವಾರ, ಸೆಪ್ಟೆಂಬರ್ 13, 2013

ನಿರ್ಲಿಪ್ತತೆ

ನಿನ್ನ ನೆನಪಿಲ್ಲ
ಗಾಳಿ ಗಂಧವಿಲ್ಲ
ನಿದ್ದೆಯಲಿ ಕರಗಿಸುವ
ಮೋಹವಿಲ್ಲ
ನಿರ್ಲಿಪ್ತತೆ!!
ಯಾರೋ ಕೂಗಿದರು
ಕಲ್ಲು ಹೃದಯ

-ಹರವು ಸ್ಪೂರ್ತಿಗೌಡ
ಭಾವನೆಗಳು ಅರ್ಧವಾಗದಿರಲಿ
ಸಂಬಂಧಗಳು ಬಟ್ಟೆಕಳಚಿ ಬೆತ್ತಲಾಗದಿರಲಿ
ಅಪಾರ್ಥಗಳು ನಿಜವಾಗದಿರಲಿ
ಏನಿಲ್ಲ ಎನಿಸುವುದು ಪಲಾಯನವಲ್ಲ
ನಿರಂತರ ಪ್ರತಿಭಟನೆ
ಏನಿಲ್ಲ ಎನಿಸುವ
ಖಾಲಿ ಹುಡುಗಿಯೊಂದಿಗೆ
ಭಾವಗಟ್ಟಿ ಗುದ್ದಾಡಬೇಡ
ಕಲ್ಲು ಬಂಡೆಗೆ ತಲೆ ಚಚ್ಚಿದಂತೆ
ಬಂಡೆ-ತಲೆ ಯಾವುದು ಒಡೆದರು...
ನೀನೇ ಜವಾಬ್ದಾರ..

-ಹರವು ಸ್ಫೂರ್ತಿಗೌಡ
4-5-2013
ವಾಸ್ತವ ಇನ್ನೂ ತೆರೆದುಕೊಳ್ಳುತ್ತಲೇ ಇದೆ
ನಿನ್ನೊಲುಮೆ ಅರ್ಥವಾದಷ್ಟು
ವಸ್ತುಗಳಿಗೆ ಎರಡು ಮುಖ ಕಾಣಿಸುತ್ತಿದೆ
ನೀತಿಯಿಂದ ಹೊರತಾದದ್ದು
ಮನುಷ್ಯನ ಆಳದ ಸಾಕ್ಷಿಗಳು
ಪ್ರಶ್ನೆಗಳು ಹೇಗೆ ಏಳುತ್ತವೆ!
ನನ್ನದು ಜೀವಿಸುವ ಅಮಲು
ಸತ್ತವನೇ ಕಡೆಮೆ ಅಪಾಯಕಾರಿ
ಗುಟ್ಟುಗಳನ್ನೆಲ್ಲ ಸ್ವೀಕರಿಸಿ ಸತ್ತುಹೋಗಿದ್ದ
ಹೊರಗಿನ ಪ್ರತಿ ಸಾವು ನನ್ನೊಳಗೂ...
ಮೌನ ಸ್ಥಿರಪ್ರಜ್ಞೆ ಗದ್ದಲದಿಂದ ತುಂಬಿ ಹೋಗುವ ಭಯ
ಅಸಹ್ಯ “ಜಿದ್ದು”; “ಪ್ರೀತಿಸು” ಎಲ್ಲ ತಾತ್ಕಾಲಿಕ
ಕಾಕತಾಳೀಯ ಮತ್ತು ನಿಗೂಢ
ಇಷ್ಟವೆಲ್ಲಾ ಅನುಷ್ಠಾನವಾಗುತ್ತಿತ್ತು
ಅಗಲಿಕೆ ಅರ್ಥವಾಗಲಿಲ್ಲ, ಪ್ರಯತ್ನಿಸಲೂ ಇಲ್ಲ
ಪ್ರೀತಿಯ ತಂಪೆರೆಯುತ್ತಿದ್ದ ಮಳೆಗೂ ಸಿಟ್ಟು
ಗುಡುಗಿ, ಕೆಂಡದಂತೆ ಶಬ್ದ ಆರ್ಭಟ
ಮಳೆ ಹನಿಯಲಿಲ್ಲ ಭೂಮಿ ಬಿಕ್ಕಳಿಸುತ್ತಿದ್ದಳು...
ಒಂದು ದಿನ ಪೂರ್ಣ ನೀಲಿ ಆಕಾಶ
ಕಚ್ಚಿದ ಬಾನಿನ ತುಣುಕು ಕೈಯಲಿ..

-ಹರವು ಸ್ಪೂರ್ತಿಗೌಡ
07-06-2013(11.35 pm)
ಅವ ದೀಪದಂತೆ ಉರಿಯುತ್ತಾನೆ
ಈಕೆ ಬೆಳಗಿನಂತೆ ಪಸರಿಸುತ್ತಾಳೆ
ಎಲ್ಲೆಡೆ ಕ್ರೂರ ನಿಶ್ಯಬ್ದ
-ಹರವು ಸ್ಫೂರ್ತಿಗೌಡ
ಜಾತಿ ಮೂಲಭೂತ ಜಿಜ್ಞಾಸೆಯೇ ಶಿವಾ
ಅದ್ವಿತ ಧೋರಣೆಎಂದಾಗಲ್ಲಿಲ ಶಿವಾ
ನಾಥನಂತೆ ಉಳಿವ ಹಂಬಲವಾಗಲ್ಲಿಲ ಶಿವಾ
ವೀರಶೈವನಾಗಿ ಉಗಮಿಸುವ ಅಹಂ ಇಲ್ಲ ಶಿವಾ
ಮಾಡುವ ತಪ್ಪಿಗೂ ಜಾತಿನುಸಾರ ಶಿಕ್ಷೆ ಯಾಕೆ ಶಿವಾ
ವ್ಯಾಮೋಹವೇ ಪ್ರಪಂಚದ ದುಖಃವೆಂದ ಶಿವಾ
ನನ್ನೆದೆಯಲಿ ನೀನೆ ಶಿವ ಲಿಂಗ ಕಟ್ಟಬೇಕ್ನೆನಲಿಲ್ಲ ನನ್ನ ಶಿವಾ

-ಹರವು ಸ್ಫೂರ್ತಿಗೌಡ
29-06-2013 (10.57 pm)
ಬರಡು ಭೂಮಿಯನ್ನು
ಮರುಭೂಮಿಯನ್ನಾಗಿಸಿದ
ಮಳೆಗೆ ಕೊನೆಗೊಂದು

ಧನ್ಯವಾದ....
ವಿದಾಯ.....

-ಹರವು ಸ್ಫೂರ್ತಿಗೌಡ
29-06-2013 (7.10)
ಅತೀತವಾದ

ಬಾಗಿಲ ಬಳಿ ಉರಿವುದಂತೆ ದೀಪ
ಯಾರೋ ಬರುವಿಕೆ, ಯಾವುದೋ ಅಗಲಿಕೆ
ದಾರಿ ಹಸಿಯಾಗಿಸುತಿರುವುದು ಇಂದು
ಭಾವಿಸಿ ಬರುವವಳಂತೆ ನನ್ನೆದೆ ಬೃಂದಾವನ ಬೆಳಗಲು

- ಹರವು ಸ್ಫೂರ್ತಿಗೌಡ
ಚುಕ್ಕಿ ಮುತ್ತಂತೆ

ರಾತ್ರಿ ಪೂರ್ತಿ ಪ್ರಪಂಚ ಪ್ರೀತಿಯಲ್ಲಿ ಮುಳುಗಿ
ನಕ್ಷತ್ರದಂತೆ ತುಂಡುತುಂಡಾಗಿ ಹರಡಿ ಹೊಳೆಯುವಾಗ
ಬೆಳಕು...
ಸೂರ್ಯನನ್ನು ಕಾಡಿಸಬೇಕು ರಾತ್ರಿ ಮರಳಿಸಲು
ಖಾಲಿ ಆಕಾಶ ನೀಲಿ ಹಾಳೆ ನೀಡಲು
ಮನಬಂದಂತೆ ಮುತ್ತಿನ ಚುಕ್ಕಿ ಇಡುವ...
ಕೋಟ್ಯಾಂತರ 'ಚುಕ್ಕಿ' ಇಟ್ಟರು ದಣಿಯಲಿಲ್ಲ ಇಬ್ಬರು
ಮತ್ತದೇ ರಾತ್ರಿ ಪೂರ್ತಿ ಪ್ರಪಂಚ ಪ್ರೀತಿಯಲ್ಲಿ ಮುಳುಗಲಿ.....

-ಹರವು ಸ್ಫೂರ್ತಿಗೌಡ
17-07-2013 (8.36)
ಉದ್ದೇಶವಾಗಿತ್ತು...

ಗಾಂಧಿಯಿಂದ ಗೋಡ್ಸೆವರೆಗೆ ಎಲ್ಲರೂ ಸತ್ತರು
ರಘುಪತಿ ರಾಘವರಾಜಾರಾಮ್.. ಕಂಠಗಳು ಸ್ತಬ್ಧವಾದವು
'ಅಖಂಡ ಭಾರತ' ನಿರ್ಮಿಸುವ 'ಜೈಶ್ರೀರಾಮ್'ಗಳು ಮೋಳಗಿದವು
ಪಾಕ್ನಲ್ಲಿ ಸಿಖ್ಖ್ರು ಅನುಭವಿಸಿದ ಗುಲಾಮಗಿರಿಗಾಗಿ
ಭಾರತದಲ್ಲಿ ರಾಮಂದಿರು ಯಜಮಾಗಿರಿ ನಡೆಸಿದರು
ಅಹಿಂಸೆ ಹೋರಾಟಗಳು ವ್ಯರ್ಥವಲ್ಲವೆಂದಿದ್ದು
ಅಹಿಂಸೆಗಳೆಲ್ಲಾ ವಿಕೃತ ಹಿಂಸೆಗಳಾಗಿ
ಪ್ರಜಾಪ್ರಭುತ್ವವನ್ನು ಭೋಗಿಸುತ್ತಾ...
ನನ್ನಕ್ಕನನ್ನು ಹರಿದು ಚಿಂದಿಯಾಗಿಸಿ ತಿಂದಾಗ
ಅಹಿಂಸೆ ಸ್ವತಂತ್ರಯುಗದ ದಂತಕಥೆ ಆಯ್ತ

ಯಾರು ಸತ್ತರೆ ದೇಶಕ್ಕೆ ಏನು?
ನಮ್ಮ ಮನೆ ಮಕ್ಕಳು ಉಂಡು ಮಲಗಿದರು
ಸಾಯಬೇಕಾದವರು ಸತ್ತರು, ಆತ್ಮಗಳಾಗಿ ಹಾರಿದರು
ಶ್ರಮಿಕನ ಶ್ರಮದಲ್ಲೇ ಅಧಿಕಾರ ಗಿಟ್ಟಿಸಿಕೊಳ್ಳುವವನು
ಜಾತಿ ಪಟ್ಟಿ ಅಂಟಿಸಿ, ಒಡೆದು ಆಳುವವನು
ಹಸಿದ ಹೊಟ್ಟೆಗಳಿಗೆ ಸಾರಾಯಿ ಹಂಚುವವನು
ಚಿತೆಯಲ್ಲಿ ರಾಜಕೀಯ ಅನ್ನ ಬೇಯಿಸುವವನು..
ಉತ್ತುವ ಭೂಮಿ ನುಂಗುವವನು
ಉಳಿದುಕೊಂಡರು..
ಉದೇಶವಿತ್ತಾ ‘ಮಹಾನ್’ ಸಾವಿಗೆ?

-ಹರವು ಸ್ಫೂರ್ತಿಗೌಡ
18-08-2013(5.30)
ಬಿಟ್ಟಿರಲಾರದೆ ಬಾಗಿದೆ ಮುಗಿಲು
ಸೇರಲಾರದೆ ಸುತ್ತಿ ಗುಂಡಾಗಿದೆ ಭೂಮಿ
ನಡುವೆ ಎಂಥದೋ ಖಾಲಿ ಸಂಬಂಧ
ಬಣ್ಣ ಭರಿಸಲಾಗದ ಕಾಮನಬಿಲ್ಲು
ಕಡು ಕಾಪಿಟ್ಟ ಭೂಮಿಯ ಒಡಲು
ಕರಗಿತೇ ಮುಗಿಲು ಸುರಿವುದೇ ಮಳೆ
ಭೂಮಿ ಒಡಲಲ್ಲೇ ನದಿ, ಹಳ್ಳ, ಕೊಳ್ಳ
ಹರಿದು ತನು-ಮನ ತೊಯ್ದರು
ಯಕಶ್ಚಿತ್ ಮಳೆ ನೆಚ್ಚಿಕೊಂಡಿದ್ದೇಕೆ
ಭೂಮಿಗೂ ಸಮುದ್ರದ ಉಪ್ಪು ಬಸಿರ ಬಯಕೆ...

-ಹರವು ಸ್ಫೂರ್ತಿಗೌಡ
(21-08-2013)

ಗುರುವಾರ, ಸೆಪ್ಟೆಂಬರ್ 12, 2013

ಧ್ವನಿಗ್ರಹಣ​

ಕೂಗಿಕೊಂಡೆ ಕೇಳಿತು ಬಿಡು
ಅನಾಥವೋ, ಅಗಲಿಕೆಯ ತರಂಗಗಳಂತೆ
ನಾನು ಅವಳಿಗೆ ಅಂದುಕೊಂಡೆ
ಅವಳು ನನಗೆ ಅಂದುಕೊಂಡಳು
ಕೇಳಿಸಿಕೊಳ್ಳದಂತೆ ಮನ ಗೋಜಲಾಯಿತು
ನೀನು ಕೂಗಿದ್ದು ನನಗೋ-ಅವಳಿಗೋ..?
-ಹರವು ಸ್ಫೂರ್ತಿಗೌಡ
13-09-2013 (7.7am)

ಸೋಮವಾರ, ಸೆಪ್ಟೆಂಬರ್ 2, 2013

ಕವಿತೆಗಳೇ ಹಾಗೆ..

ಮುರಿದ ಮನಸ್ಸಿನ ಶಬ್ದ
ಸುರಿದ ಕಣೀರಿನ ಸ್ಫೂರ್ತಿ
ಹಸಿದ ಬಗರಿ ಮೂಳೆ
ಕೊಂಕಿದ ಗಂಡಸಿನ ಬುದ್ಧಿ
‘ದಾನಿ’ಗಳ ಹಣದ ಧಿಮಾಕು
ಸಂತೆಯಲ್ಲಿ ಕಳೆದುಕೊಂಡ ಮಾನ
ಕೊಳೆಯುತ್ತಿರುವ ಹುಳುಕು ಸಮಾಜ
ಚುಡಾಯಿಸಿದ ಹುಡುಗನ ನೆನಪು...
ಕೈಗೆ ಎಟುಕದ ಚಂದ್ರ
ನಿರಾಕಾರಗೊಂಡ ಮುಗಲು ಗುಲಾಬಿ
ಕವಿತೆಗಳೇ ಹಾಗೆ..ಕವಿತೆಗಳೇ ಹಾಗೆ..
ನತದೃಷ್ಟ ಭಾವಗಳೇ ಯಶಸ್ವಿ ಕವಿತೆಗಳು

-ಹರವು ಸ್ಫೂರ್ತಿಗೌಡ
01-09-2013(4.6pm)
ಹೋಗಲಿ ಬಿಡು

ನನ್ನ ಮೌನವೇ ನಿನಗೆ ಕೋಪ
ನಿನ್ನ ನಿರ್ಲಕ್ಷ್ಯವೇ ನನ್ನ ಮೌನ
ಆತ್ಮವಿಶ್ವಾಸ ಬಂದೊಡನೆ ಬಂದುಬಿಡು
ಅದೇ ದಾರಿಯಲ್ಲಿ, ಅದೇ ಬೀದಿಯಲ್ಲಿ
ಕಾಯುತ್ತಿಲ್ಲ, ಕಾದು ಬೇಜಾರಾಗಿಲ್ಲ
ಸುಮ್ಮನೆ ನಿಂತಿದ್ದೀನಿ ಬರುವಿಕೆಗಾಗಿ
ಬರಲಾಗದಿದ್ದರೆ ಹೋಗಲಿ ಬೀಡು
ಕಣ್ಣ ಕಸದಂತೆ ತೆಗೆದುಬಿಡು...
ನನ್ನ-ನಿನ್ನ ಭೇಟಿಯನ್ನೇ ಮರೆತು ಬಿಡು

-ಹರವು ಸ್ಫೂರ್ತಿಗೌಡ
31-08-2013(10.36)
ಅವ ಕಣ್ಣು ಮಿಟುಕಿಸಿದ
ನಾನು ಕಣ್ಣು ಅರಳಿಸಿದೆ
ನುಲಿದ, ನಾಚಿದೆ
ಗಡ್ಡ ನಿವಿರಿ, ತಲೆಕೆರೆದುಕೊಂಡ...
ತಲೆ ಬಗ್ಗಿಸಿ ಎದೆ ನೋಡಿಕೊಂಡೆ
ಪಡೆದವನಂತೆ ಶರ್ಟ್ ಗುಂಡಿ ಮುಟ್ಟಿಕೊಂಡ
ಸಿಕ್ಕವಳಂತೆ ಕಿವಿ ಸವರಿ ಓಲೆ ಮುಟ್ಟಿದೆ
ಕೈಕಟ್ಟಿ ಎದೆಗೆ ಒತ್ತಿಕೊಂಡ
ಬಿಗಿದಂತೆ ನಿಧಾನಿಸಿ ಉಸಿರೆಳೆದೆ
ತುಟಿ ತೆರೆದು ಗಾಳಿಯಲ್ಲಿ ತೇಲಿಸಿದ
ತುಟಿ ಮುಚ್ಚಿ ನಾಚಿ ಎದ್ದು ಹೋದೆ..

-ಹರವು ಸ್ಫೂರ್ತಿಗೌಡ
ಎರಡೇ ಗುಂಡಿ
=====================
ಅವಳಿಗೇನೋ ಬಿಗಿತ ಇವನಿಗೇನೋ ಸೆಳತ
ಬಿಚ್ಚಿ ಹೋಗಿದ್ದು ಬ್ಲೌಸ್ನ ಎರಡು ಗುಂಡಿ
ವಯಸ್ಸಿನ ಸಾಕ್ಷಿ, ಹಿಸುಕಾಡಿದ ಕಲೆ
ತೂಗು, ನಿಲ್ಲಲಾಗದೆ ಅರ್ಧ ಹೊರಕ್ಕೆ
ಸೆರಗೆಸೆದು ಬಿಗಿದರೂ, ಮೇಲೆತ್ತಿ ಮುಚ್ಚಿದರೂ
ತೆಳುವ ಪದರಗಳ ಮಧ್ಯವೇ ಕಣ್ಣ

ನಸುಕಿನ ಪೇಟೆಯ ಮಧ್ಯೆ ನಿಂತು ‘ಮಧ್ಯ’ ನೋಡುವ...
ಸಪ್ಪೆ ಆಸೆಗಳು ಮನದಲ್ಲಿ ತುಂಬಿ..
ದೇಹದ ರಕ್ತವೆಲ್ಲಾ ಮುಖ ನರಗಳಲ್ಲಿ ಹರಿದು
ಹಿಡಿಸಲಾರದ ಅಸಹ್ಯ ನಾಚಿಕೆ, ಬೇಡವಾಗಿತ್ತೇನೋ
ತಿಳಿದವನಂತೆ ನಗು, ಬಯಲಾಯಿತ ಭಯ

ರಾತ್ರಿ ಬಂದು ಹೋದ ಮಳೆ ನೆನಪಲ್ಲೇ
ರಸ್ತೆ ಮಧ್ಯೆ ನಿಂತ ಕೊಚ್ಚೆ ಗುಂಡಿಗೆ ಉಗಿದಳು
ಕೊಳಕು.. ಕೊಳಕು.. ಕೊಳಕು ಜನ..

-ಹರವು ಸ್ಫೂರ್ತಿಗೌಡ
(23-08-2013 11.20 pm)

ಭಾನುವಾರ, ಜುಲೈ 14, 2013

ಭವಿಷ್ಯ ಬದಲಿಸಿ

ತಿರುಗಿಸಿ ಮುರುಗಿಸಿ ನೋಡಿರೋ

ಒಂದೇ ಹಣೆ ಬರಹ

ಭೂತದ ಭಯಕೋ

ಭವಿಷ್ಯದ ಆತಂಕ್ಕಕೋ

ಶೇರು ಸೂಚ್ಯಂಕವಾಗಬಾರದೇ..

ಎಷ್ಟು ಸರಿ ನೋಡಿದರು

ಬದಲಾಗುತ್ತಿಲ್ಲ ಭವಿಷ್ಯ

ಅದೇ ಮೇಷ, ವೃಷಭ, ಸಿಂಹ

ಅದೇ ಯೋಗ, ಅದೇ ಗ್ರಹಚಾರ

ಚಿರಿದೇ ಬದಲಿಸಿ ಭವಿಷ್ಯ

ಕಂಡುಕೊಳ್ಳಿ ಭವಿಷ್ಯವ ಕಾಯಕದಲ್ಲಿ

ಯಾರೂ ಉಲಿದ್ದಿದರು ಶಾಂತೆಯಂತೆ

-ಹರವು ಸ್ಫೂರ್ತಿಗೌಡ
ವಿರಹ ಬೆಂಕಿ ಹತ್ತಿ

ಉರಿದು ಪ್ರೀತಿಧಾರೆ

ಅರಿಯುವ ವೇಳೆಗೆ

ಪ್ರಣಯದ ಉರಿ ನಿಲ್ಲಿಸಿದೆ

ಕಾದು ಕುದಿದು ಮರಳಿದ

ವಿರಹ ತಣ್ಣಗಾಗದು

ಸುಟ್ಟಿತು ಹೃದಯ ಬಾಂಡಲಿ

ಬೂದಿಯಾಗಿ ಹಾರಿ

ಗಾಳಿಯಲ್ಲಿ ಲೀನವಾಗದೆ

ಮೈಕಾವೇರಿಸುತ್ತಿದೆ

ಕಾಡಿಸುತ್ತಿದೆ

-ಹರವು ಸ್ಫೂರ್ತಿಗೌಡ
ಮಾತಾಡ್ತೀಯಾ ಸಮೃದ್ಧಿಯಾಗಿ

ಮಾತಾಡ್ತಾನೇ ಇರ್ತಿಯಾ

ನಾನಂತು ಇಲ್ಲಿ ಮೌನ ಗೌರಿ

ನನ್ನ ಮಾತನ್ನು ಮರೆಸುವಷ್ಟು ಮಾತು

ತುಟಿ ಬಿರಿದು ನಗುವಾಗುತ್ತಿಯಾ

ಹೃದಯ ಕಟ್ಟೆ ಒಡೆಸಿ

ಕಲ್ಲಾದ ಭಾವ ಹರಿಸ್ತಿಯಾ

ಆದರೂ ನಾನಂತು ಇಲ್ಲಿ ಮೌನ ಗೌರಿ

ಆಸೆ, ಕನಸು, ಭವಿಷ್ಯಗಳ

ವಿನಿಮಯ, ವಿಚಾರ ಸಂಕಿರಣ

ರೇಗಿಸಿ ಕೆಂಪೇರಿಸ್ತಿಯಾ

ಅಳುಕಿದರೆ

ಹೆಣ್ಣೆದೆ ನೋವಾಯಿತೇನೋ?

ಮರುಗುತ್ತಿಯಾ!

ಆದರೆ ನಾನಂತು ಇಲ್ಲಿ ಮೌನ ಗೌರಿ

ಮಾತು ಕಸಿದುಕೊಂಡವನು

ಯಾವತ್ತೋ ಮೌನವ ಉಡುಗೊರೆ ಇತ್ತ

ಎಂದಿಗೂ ನಾನು ಮೌನ ಗೌರಿ

-ಹರವು ಸ್ಫೂರ್ತಿಗೌಡ

ಮಂಗಳವಾರ, ಜುಲೈ 9, 2013

ಹಕ್ಕಿ, ಕಪ್ಪೆ ತಿಂದ ಬೆಕ್ಕು

ನಿದ್ರೆಯಲ್ಲಿ  ಕುತ್ತಿಗೆ ಬಿಗಿದಂತೆ
ಉಸಿರುಗಟ್ಟಿಸುವ ದೀಢಿರ್ ಭಾವಗಳು
ಉಕ್ಕುವ ಹರೆಯದ ಮನೋಭಿಲಾಷೆ
ಸುಳುಹುಗಳಿಗಾಗಿ ಮೇಲೆ ಕೆಳಗೆ
ಸುತ್ತಮುತ್ತ ವ್ಯರ್ಥ ಶೋಧಿಸುತ್ತಾ
ಆಸರೆ, ಅಕ್ಕರೆ ಹುಡುಕುವಾಗ ಮಧ್ಯರಾತ್ರಿ
ಅವ್ಯಚಿರಸ್ಥಿತ ವಿವರಗಳಿಗಾಗಿ
ಕೈಲಾಗದ ಪುರುಷತ್ವ ಕೆರಳಿಸುತ್ತಾ..


ಹಳದಿ ಅನುಮಾನದ ಕಣ್ಣು
ಒಗೆದಷ್ಟು ಕೊಳೆ ಕರವಸ್ತ್ರಗಳಲ್ಲಿ ಹಳದಿ ಉಳಿದಂತೆ
ಕೊಚ್ಚೆನೀರಿನ ತೊಟ್ಟಿಯಲ್ಲಿ ಮುಳುಗಿದ
ಕೊಳಕಾದ ಎಂಜಲು ತಟ್ಟೆಯಾಗಿ ಬಂದಿದ್ದಾನೆ
ಎಷ್ಟುಕೊಟ್ಟು ಉಂಡನೋ, ತಿಂದನೋ
ತೇಗಿ ನನ್ನೆದೆಯ ಮೇಲೆ ವಿಶ್ರಾಂತಿ
ತೆರೆದುಕೊಂಡ ಸಕ್ಕರೆ ಭರಣಿಯಿಂದ ಮಲ್ಲನೆ
ಇರುವೆ ಹೆಜ್ಜೆ ಸಪಳ ಕಿವಿ ಕಚ್ಚುವಾಗ
ಮುರಿದ ಹಕ್ಕಿಗೂಡಿನ ಮನಬಾಗಿಲ ತುದಿ
ಮಡಿಲ ಮಗುವಿಗಾಗಿ ಕೊಂಡಿ ಸಣ್ಣಗೆ ಇನ್ನೂ ಅಂಟಿಕೊಂಡಿದೆ


ಹಕ್ಕಿ ಹುಚ್ಚು ಅನುಮಾಗಳ ಹಿಂದೆ ಬೆಕ್ಕ ನಗು
ಹೊಲಿದುಕೊಂಡ ಎಷ್ಟೋ ಸಂಬಂಧಗಳು ಕಂಡವು
ಹೊಲಿಗೆ ಹಿಂದೆ ನೋವುಗಳು ಕಂಡವು
ಪ್ರತಿ ಸಂಬಂಧಗಳು ಸೂಜಿ ಚುಚ್ಚಿದಂತೆ
ಒಳಗಾಗುವ ಹಿಂಸೆ ದಬ್ಬಾಳಿಕೆಗಳು
ಲಗ್ನಕೊಂಡದ ಬೆಂಕಿಯಂತೆ ಧಗಿಸಿದವು
ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ವರ್ತಿಸುವುದು ಪುರುಷ ಪ್ರಭುತ್ವ
ಹಕ್ಕಿಯಂತೆ ಮನೆಯಲ್ಲೇ ಗುಮ್ಮಗೆ ಕುಳಿತ ಮಡದಿ ಮುಂದೆ
ಕಪ್ಪೆತಿಂದ ಲೋಭಿ ಗಂಡು ಬೆಕ್ಕಂತಾದ

-ಹರವು ಸ್ಫೂರ್ತಿಗೌಡ
9-07-2013(6.29)

ಸೋಮವಾರ, ಜುಲೈ 8, 2013

ಮರೆತ ಮರೆವುಗಳಲ್ಲಿ ನಿನ್ನಾ ನೆನಪು
ಮನ ಮಾಳಿಗೆ ತುಂಬ ನಿನ್ನ ಗುಟ್ಟು ಶವಗಳು
ನಿನ್ನ ಕಂಡ ಕ್ಷಣದಿಂದ ಮರೆಯಲಾರೆ ನಿನ್ನಾ ಗುರುತು
ಬಣ್ಣವಿಲ್ಲದ ಕಣ್ಣ ಹನಿಯ ಕೇಳುವೆ ಯಾಕೆ ಪುನಃ ಪುನಃ
ಮರೆತೆನೆಂದು ಕುಂತರು ಮರೆಯಲಾಗದ
ಬಂದ ಸುಳಿ ಇಲ್ಲದಿದ್ದರು ಹೋರ ಹೋಗಲಾರದ
ನೆನಪುಗಳಲ್ಲಿ ಉಳಿಹೋದವ ನೀ ಯಾರೋ
ಬೇಡವೆಂದರು ನನ್ನನೇ ಬೇಡುತಿರುವ
ಕನಸಲು ಸೆಳೆವ ನಿನ್ನ ಮೌನ ಗಾನ ಯಾವುದೋ
ಕಳೆದುಕೊಂಡ ಮನ ಜಾಗವೆಲ್ಲಾ ಖಾಲಿ ಎಂದೆ
... ಖಾಲಿ ಎನಿಸಿದರು ಇನ್ಯಾರು ಇಲ್ಲ ನಿನ್ನ ಹೊರತು
ಮತ್ತೆ ಬಂದು ಪುಟ ತಿರುಗಿಸ ಬೇಡ
ಅರಳಿದ ಪಾರಿಜಾತ ಅಲ್ಲೇ ಬೀಳಲ್ಲಿ

-ಹರವು ಸ್ಫೂರ್ತಿಗೌಡ
27-06-2013 (12.00 AM)
ಜಾತಿ ಮೂಲಭೂತ ಜಿಜ್ಞಾಸೆಯೇ ಶಿವಾ
ಅದ್ವಿತ ಧೋರಣೆಎಂದಾಗಲ್ಲಿಲ ಶಿವಾ
ನಾಥನಂತೆ ಉಳಿವ ಹಂಬಲವಾಗಲ್ಲಿಲ ಶಿವಾ
ವೀರಶೈವನಾಗಿ ಉಗಮಿಸುವ ಅಹಂ ಇಲ್ಲ ಶಿವಾ
ಮಾಡುವ ತಪ್ಪಿಗೂ ಜಾತಿನುಸಾರ ಶಿಕ್ಷೆ ಯಾಕೆ ಶಿವಾ
ವ್ಯಾಮೋಹವೇ ಪ್ರಪಂಚದ ದುಖಃವೆಂದ ಶಿವಾ
ನನ್ನೆದೆಯಲಿ ನೀನೆ ಶಿವ ಲಿಂಗ ಕಟ್ಟಬೇಕ್ನೆನಲಿಲ್ಲ ನನ್ನ ಶಿವಾ

-ಹರವು ಸ್ಫೂರ್ತಿಗೌಡ
29-06-2013 (10.57 pm)
ಅತೀತವಾದ

ಬಾಗಿಲ ಬಳಿ ಉರಿವುದಂತೆ ದೀಪ
ಯಾರೋ ಬರುವಿಕೆ, ಯಾವುದೋ ಅಗಲಿಕೆ
ದಾರಿ ಹಸಿಯಾಗಿಸುತಿರುವುದು ಇಂದು
ಭಾವಿಸಿ ಬರುವವಳಂತೆ ನನ್ನೆದೆ ಬೃಂದಾವನ ಬೆಳಗಲು

- ಹರವು ಸ್ಫೂರ್ತಿಗೌಡ


ಕೂದಲ ಮೇಲೆ ಪ್ರೀತಿ ಅವನಿಗೆ

ಬೆಟ್ಟದ ಬೆಳದಿಂಗಳಂತೆ ದಿನವಿಡೀ ಪಕ್ಕ ಕುಳಿತ ಅವಳು
ಹಾರಿದ ಕೂದಲು ಅವನ ಮುಖವರೆಸಿ, ಉಸಿರ ಮೆತ್ತಿಕೊಂಡು
ಪುನಃ ಸುರಳಿ ಸುತ್ತಿ ಕತ್ತುಗಳಿಗೆ ಅವನುಸಿರ ತಲುಪಿಸಿ ಎದೆಗಿಳಿದವು
ಕುತ್ತಿಗೆ ಬಿಡಾರ ಸೇರಿದ್ದು ಅವನು ಮುತ್ತಿಟ್ಟು ಎಂಜಲು ಕೂದಲುಗಳೇ

ನಯನಾಜುಕು ಇಲ್ಲದ ಚೆಲ್ಲು ಬುದ್ಧಿ ಕೂದಲು
ಎಂದೂ ಕಿವಿಯ ಹಿಂದೆ, ಗಂಟಿನೊಳಗೆ ಸೇರಿಲ್ಲ
ಎಷ್ಟೇ ಬಿಗಿದು ಕಟ್ಟಿದರು ಗಂಭೀರ ಕಲಿಯಲ್ಲಿಲ
ಬಿಸಿ ತುದಿಬೆರಳಿಂದ ಅಣೆತಾಗಿಸುತ್ತಾ ಒಂದೆಳೆ ಬಿಡಿಸಿಹೋದರೆ
ಇವುಗಳಿಗೆ ಸ್ವತಂತ್ರ, ಅವನ ಗುರಾಯಿಸುವಿಕೆಗೆ ತಕ್ಕಂತೆ
ಬಿಚ್ಚಮ್ಮಗಳಾಗಿ ಹಾರಿಕುಣಿದು ಕೆನ್ನೆಗೆ ಬಡಿಯುತ್ತ ಆಟ

ಕೂದಲಿಗೆ ಮೋಹಗೊಂಡಿದ್ದು ಸೀಗೆಯ ಘಮಕ್ಕೆ
ನಿನಗೆದರಿ ಕಿವಿ ಸೇರುವ ಮೋಟು ಮುಂಗುರುಳುಗಳ ಧಿಮಾಕು
ಒದ್ದೆಕೂದಲಿಂದ ನೀರೆಲ್ಲ ಒಂದೊಂದೇ ಹನಿಯಾಗಿ ಇಳಿದು
ತೊಯ್ದ ನೀಳಬೆನ್ನು ಮುಚ್ಚಿಡುವ ಆಕೂದಲ ರಾಶಿ ಅಬ್ಬಾ!!!

ಪ್ರಶ್ನೆ ಕೇಳದೆ ಸಿಕ್ಕ ಉತ್ತರಕ್ಕೆ ತತ್ತರಗೊಂಡರು
ಕನ್ನಡಿ ಮುಂದೆ ನಿಂತಾಗ ಪ್ರತಿ ಎಳೆ ಕೂದಲ್ಲಲು
ಬಿಡಿಸಲಾಗದ ಅವನ ಅಶ್ಚರ್ಯ, ಸೂಜಿಗಗಳ ಗಂಟು
ಇವಕ್ಕೂ ನನಗಿಂತ ಹೆಚ್ಚು ಅವನ ಮೇಲೆ ಆಸೆ
ನಾನು ಬಂಧಿಸುವವಳು, ಅವನು ಸ್ವತಂತ್ರಗೊಳ್ಳಿಸುವವನು
ನಿನ್ನ ಬಿಗಿದು ಕಟ್ಟುವುದೇ ಅವನು ಬಿಡಿಸುವ ಪರಿಗಾಗಿ
ಬಿಡಿಸಿಕೋ, ಹಾರು ಸ್ವತಂತ್ರವಾಗಿ ಅವನ ಆಸೆಯಂತೆ
-ಹರವು ಸ್ಫೂರ್ತಿಗೌಡ
07-07-2013 (6.30 pm)

ಶುಕ್ರವಾರ, ಜೂನ್ 7, 2013

ಗುಡಿ ಗೋಪುರಗಳ ಅರಿವಿಲ್ಲ
ಭಯದ ಭಕ್ತಿ ಬೇಡುವೆಯೇನು
ಕಲ್ಲ ಮೇಲೆ ಪ್ರೀತಿ ಬಾರದು
ಅಂತರಂಗ ಧ್ಯಾನಕ್ಕೆ ಒಲಿಯದ ದೇವರು ನೀನು
ಪೂಜಿಸಿ, ಸುತ್ತಿಸುವ ಕಲೆ ಬಲ್ಲೆನೇನು
ಸಾಕ್ಷಾತ್ಕರಿಸಿ ಒಲಿಸಿಕೊ
ನನ್ನದೂ ಕಲ್ಲು ಹೃದಯವೇ


-ಹರವು ಸ್ಫೂರ್ತಿಗೌಡ
23-05-2013 (8.10am)
ವ್ಯಾಮೋಹಿ

ಕಾಣದ ದೂರ ತೀರ ಕರೆಯುವುದು
ಸುತ್ತು ಸುಳಿಯ ನಡುವೆ ಬಿಗಿದಪ್ಪಲು
ಎದೆ ಆರ್ಭಟದ ಆಸೆ ಮುದ್ದಿಗೇನೋ
ಕಣ್ಣ ಬಯಕೆ ತೃಪ್ತಿ ಇಲ್ಲದ ಮುತ್ತು ಕೊಡಲು
ಒಳಗೊಳಗೆ ಕೊರೆಯುವ ತೀವ್ರ ಝರಿಯೇ
..

ಭೂಮಿ ಗರ್ಭ ಮೌನಗಳಿಗೆ ಕೈಯಿಟ್ಟು ಜುಂ ಎನಿಸಿ
ಕಣ್ಮುಚ್ಚಿ ಮೈತುಂಬಿ ಬೆನ್ನಿಗಬ್ಬಿ
ಎದೆ ಭಾರವ ಎದೆಗೆ ಇಳಿಸಿ
ಹತ್ತಿರವಾದಷ್ಟು ಸೆಳೆತ ನೀಡಿ
ಅರಿವಿಗೆ ಅರಿಯದೇ ಪ್ರೀತಿ ಹೀರಿ
ಮೊಗ್ಗಿನಿಂದ ಹೂವು ಅರಳುವಂತೆ
ತೆರೆದ ತೆರೆಗಳ ತೆರವು ಮನವೇ

ಕಾಡಿದಷ್ಟು ಮೋಹಗೊಳಿಸಿ
ಬೇಡಿದಷ್ಟು ಹಣ್ಣಾಗಿಸಿ
ಹರಿವ ಜೀವರಸಗಳ ಗುಪ್ತಗಾಮಿನಿ
ಪ್ರೇಮವೋ ಪ್ರೀತಿಯೋ ಬಂದು ಹೋಗಲಿ
ಪುಸ್ತಕದಲ್ಲಿ ಬರೆದಂಗೆ ಬದುಕಲಾರೆ

ಸುಳಿಯಲ್ಲಿ ಸಿಲುಕಿದ ನಾನು
ತಳದಲ್ಲಿ ಮೀನು ಅದರ ಅಸ್ತಿ


-ಹರವು ಸ್ಫೂರ್ತಿಗೌಡ
28-05-2013 (2.38 pm)
ಕೆಂಪು ಗೀತೆ

ಯಾವ ಗುರುತೋ, ಯಾರ ಮತವೂ
ಗೆದ್ದ ಮೇಲೆ ನಾವು ಯಾರು
?

ಮತವ ಪಡೆದು ಬದುಕ ಕಳೆದು
ಪ್ರಶ್ನೆಸಿ ನಿಲ್ಲುವರು ನೀವು ಯಾರು?

ಕಾಡ ಕಣಿವೆಯಲಿ ಗುಡಿಸಲ ಕಟ್ಟಿ
ಉತ್ತಿ-ಬಿತ್ತಿ ಬದುಕ ಕಂಡ ಜೀವ ನಾವು

ಹುಲಿಯೇ ಇಲ್ಲದ ಸಂರಕ್ಷಿತ ಅರಣ್ಯವೆಂದು
ಕಿತ್ತು ಒದರಿದಿರೀ ಪುಟ್ಟ ಗುಡಿಸಲ ನೀವು
ಕಟ್ಟಿದ ಬದುಕ ಕೆಡವಿ ಹೋದವರೆ
ಕರಾವಳಿಯ ಕಾಣದ ಕಾನನ ಕಂಡಿರೇ ನೀವು
ಕೆಂಪು ಬಣ್ಣವ ಮುಖಕ್ಕೆ ಬಳಿದು
ಬಣ್ಣವಿಲ್ಲ ಕತ್ತಲಲಿ ಕೂರಿಸಿ ಕೇಳುವಿರಿ
ಕೆಂಪು ಹುಡುಗ ನೀನು ಯಾರು

ಕೆಂಪು ಹುಡುಗ ನಾನು ಯಾರು?
ಎಂದ ಮೇಲೆ ಹಿಡಿದೆ ಕೆಂಪು ಬಾವುಟ
ಗೇರು ಬೀಜದ ಸೊನೆಯ ಕೋಪ

ಗುಳೆಗುಳೆ ಹೊಟ ನನ್ನವರ ಬದುಕು ಇನ್ನೆಲ್ಲಿ
ತಿನ್ನುವ ಅನ್ನ ಮಣ್ಣಿಗೆ ಸುರಿದಿರಿ
ಸಿಡಿದು ಹಿಡಿಯ ಬಾರದೆ ಬಂದೂಕು?
ಕನಸ ಬೆರಸಿ ನೆಟ್ಟ ಅಡಿಕೆಗೆ
ಬೆಂಕಿಯಿಟ್ಟು ಕೇಕೆ ಹಾಕುವ ಪಡೆಯೇ
ಹಾಡಬಾರದೇ ಕ್ರಾಂತಿ ಗೀತೆಯ ನಾನು
ನಾನು ಮಲೆ ಕುಡಿಯ.. ನಾನು ಮಲೆಕುಡಿಯ..
ಹುಲಿಯು ನನ್ನದೇ ಮಲೆಯು ನನ್ನದೆ
ಸಂರಕ್ಷಿತ ಅರಣ್ಯವೂ ನನ್ನದೇ
ಬಿಟ್ಟು ತೊಲಗಿರಿ ನೀವು..


-ಹರವು ಸ್ಫೂರ್ತಿಗೌಡ
13-05-2013(5.57pm)
ಎಲ್ಲೋದಳು?

ಕಬ್ಬು ಬೆಳೆದ ನೀರು ಗದ್ದೆಯಲ್ಲಿ
ಮೊಳೆಯಲಿಲ್ಲ ರಾಗಿ
ತುಂಬಿ ಹಾಲು ಕಟ್ಟುತ್ತಿದ್ದ ಭತ್ತ
ಬಣಗುಟ್ಟಿ ಜಲ್ಲನೆ ಉದುರಿ
ನಾಡ ಹಸು, ಹಿಂಡು ಹಿಂಡು ಕುರಿಗಳ

ಸಂತೆ ಬಿಕರಿಗೆ ಬಿಟ್ಟು
ಬಿತ್ತನೆ, ನಾಟಿ ಯಾವ ಕೂಲಿಯು ಸಿಗದೆ
ತುಂಡು ಬೀಡಿಗೆ ಬೆಂಕಿಯಿಟ್ಟರೆ..
ಕಿಟ್ಟದ ಕಿಡಿ ಯಾವುದೋ ರೋಷಕ್ಕೆ ಬೆಂಕಿಯಿಟ್ಟು
ಯಾರ ಸುಡಲಿಕ್ಕೆ ಕಾಯುವುದೋ
ಹರಳಲ್ಲಿಲ ಬೇಲಿ ಹೂ
ಮಾಗಲಿಲ್ಲ ಮರದ ಹಣ್ಣ
ಸರಿಯಲಿಲ್ಲ ಮೊದಲ ಮಳೆ
ಬರದ ಕಣ್ಣು ಬರಿದು
ಕಾವೇರಿ ನಿನ್ನೆಲ್ಲೇ?


-ಹರವು ಸ್ಫೂರ್ತಿಗೌಡ
13-05-2013(5.30pm)
ಕರೆವ ಕೆಚ್ಚಲ ಕತ್ತರಿಸಿ
ಉಳುವ ಎ
ತ್ತಿನ ಕೊರಳ ಗಂಟೆ ಮಾರಿ

ಊರು ಊರಿಗೆ ಗುಳೆ ಹೊರಟೇವು
ಎಂದೋ ನೀರು ಕುಡಿದ ಎಮ್ಮೆ
ಬಾಯಾಡಿಸುವುದೇ ಮರೆತ ಕುರಿ-ಆಡು
ಬಸರಿ ಬಣಂತಿರು ತುಂಬಿದ ಗಾಡಿ
ಎಳಿ ಎಳಿಯಲೋ ಬಸವ
ನಲೆ ಕಾಣು ವರೆಗೆ
ಬೆನ್ನು ಹಿಡಿದ ಗಂಡಸು ಹೊಟ್ಟೆ
ಅಳಲು ಕಣ್ಣಿರು ಬತ್ತಂತೆ ಕಂಡ ಕೂಸುಗಳು
ಚೀವ್ ಗುಡದ ಕೋಳಿ ಪಿಳ್ಳೆಗಳು
ನಡೆದು ನಡೆದೇ ಕಾಣದಂತಾದೋ
ಗೋಧಾವರಿ ಮತ್ತೆ ಮರೆತೆ ಹರಿಯಲು

-ಹರವು ಸ್ಫೂರ್ತಿಗೌಡ
ಹೊರಗೆ ಶೋಧಿಸಿ
ಳಗೆ ಶುದ್ಧವಿರಿಸಿ
ಉಭಯಶಂಕೆಗಳ ಕಳೆದು
ಸ್ಫಟಿಕ ಶಲಾಕೆ ಇರಿತ ತೊರೆದು
ಭಾವ ಭವಗಳ ಮೀರಿ
ಧರ್ಮ ಕರ್ಮಗಳ ಮಾರಿ

ಮನ ಬಂದುದ ಬಯಸಿ ಬಯಸಿ
ಜೀವ ಬಯಲು

ಹಸಿದು ತಿಂದೆ
ತಿಂದಷ್ಟು ಹಸಿವು
ಪೂಜಿಸಿದಷ್ಟು ಭಕ್ತಿ
ಕೋರಿದಷ್ಟು ವರ
ಮುತ್ತಿಟ್ಟಷ್ಟು ಮುದ್ದೋ
ಮುದ್ದಿಂದ ಮುತ್ತೋ

-ಹರವು ಸ್ಫೂರ್ತಿಗೌಡ
ಉಳಿದ್ದಿದು ನಾನು

ನಗು ಮುಖವಾಡದೊಂದಿಗೆ
ನನ್ನನೂ ಸುತ್ತವರಿದ ಸಮಾಜ
ನನಗಿನೂ ಪೂರ್ತಿ ಗೊತ್ತಿಲ್ಲ
ಪ್ರತಿ ದಿನವೂ ಹೊಸ ಪ್ರತಿ ದಿನ
ಮನ ಮನಗಳು ಜಾತ್ರೆ ಗಲಭೆ ಗೊಂದಲಗಳು

ಕೀಲುಗೊಂಬೆ ಆಡಿಸೋನು ಯಾರು
ಮರದಗಾಡಿ, ಕರಿ ಮೇಕೆ, ಕೆಂಪು-ಕಂದು ಹುಂಜ
ಮಾಸಲು ಪಂಚೆ, ಹಸಿರು ಕಾಂತ್ರಿ
ಬಯಲು ಸೀಮೆ ಧೋ ಮಳೆ
ಉಗಿದು ಬಾಯಿನೊಂದು ಸುಮ್ಮನಾದ ನಭ
ಧರಣಿ ಒಡಲೊಳಗಿಂದಡು ಬೇಸಿಗೆಯ ಕಾವು
ಮಳೆನಿಂತ ಮೇಲೆ; ಜನಮನದಲ್ಲೂ
ದ್ವೇಷದ ಕೆಟ್ಟ ಗಂಡಸಿನ ಕಾಮಕಣ್ಣಿನ
ರಪ್ಪೆಮುಚ್ಚಿದ ಬೂದಿಕೆಂಡ
ಮನೆ ಸೂರಿನ ಮೇಲೆ
ಸಣ್ಣದೊಂದು ಹೊಗೆ.
 
ಫ್ಯಾಕ್ಟರಿ ಗುಡುಗುಡು ಆರ್ಭಟ
ಕಲಿಯದೆ, ಅರಿಯದೆ, ತಿಳಿಯದೆ
14ಕ್ಕೆ ಹೊಗೆ ಕುಡಿಯಲುಹೊಂಟು ನಿಂತ ಹೈಕಳು
ತಿಪ್ಪೆ ಮೇಲೆ ಕುರಿ, ಕೋಳಿಯ ಕರುಳು
ಎಲ್ಲವೂ ಭುಗಿಲೆದ್ದು, ಬಿಗಿದುಕೊಂಡಾಗ
ಊರಾಚೆ ರಾಮದೇವ ದೇವಾಲಯ
ನಮ್ಮಡಿಗೆ ಬೆಂಕಿಯಿಟ್ಟ ಹೊಟ್ಟೆ ಸುಟ್ಟಾವೂ
ಸುತ್ತ ದೇವರಕಾಡಿನ ಮರಗಿಡಗಳ ಕೇಕೆ
ಸೇಡು ತೀರಿಸಿಕೊಂಡ ಗರ್ಭ ಗುಡಿಯ ಸೂಪ್ತಿ
ಭವಿಷ್ಯ ತಿಳಿದು ಗೆದ್ದಲು ಹಿಡಿದು ಹೋದನಂತೆ
ಉತ್ಸವ ಗರುಡ ತೇರು..
ಉಳಿದ್ದಿದು ನಾನು; ಮುಂದಿನ ಗರುಡಗಂಬದಲ್ಲಿ
ನನ್ನಂತೇ ಏನು ಅರ್ಥವಾಗದೆ ನಗುವ ಹನುಮಂತ

-ಹರವು ಸ್ಫೂರ್ತಿಗೌಡ
ನಿನಗರಿಯದೇ ಮಾಡುವ
ಮುದ್ದಿನ ಕೆಲಸವೆಲ್ಲ ಪಾತಕವೇ
ನಗರಿಯದೇ ಕೆನ್ನೆಗೆ ಭಾರಿಸಿದ್ದೇಲ್ಲಾ ಪ್ರೀತಿಯೇ
ಭೇಟಿ-ನಿದ್ದೆ ಎರಡೂ ಆಕಸ್ಮಿಕ
ಸೊಂಟ ಬಳಸಿದ ನೀನು
ಭುಜಕೊರಗಿದ ನಾನು
ಎರಡೂ ಅಪಘಾತ
ಒಳಗೂ-ಹೊರಗೂ
ಯಾವುದಕ್ಕೂ ಅರ್ಥವಿಲ್ಲ
ಸುಮ್ಮನಿರುವುದು ವಾಸಿ
ಬರೆದ ಮೇಲೂ
ಓದಿದ ಮೇಲೂ..

-ಹರವು ಸ್ಫೂರ್ತಿಗೌಡ
28-04-2013(9.38 pm)
ನನಗಲ್ಲದ್ದು

ಅಳಲು ಸಿದ್ಧವಾದವಳಂತೆ
ಕಾಡಿಗೆ ಇಲ್ಲದ ಕಣ್ಣು
ಕೆನ್ನೆಯಿಂದಿಳಿದು ಕಿವಿಗುರುಳಿದ..

ಕಿವಿಯೊಲೆಯಲ್ಲಿ ಹುಡುಕಿದ
ನೀಲಿ ಕಲ್ಲರಳು!
ನೀ ಕೊಡುವ ಮುತ್ತು ನನ್ನಗಲ್ಲ
ನಾಚಿಕೆ ನಡುಜಾರಿದರೆ...?


-ಹರವು ಸ್ಫೂರ್ತಿಗೌಡ
ಎಲ್ಲೋ ನಿಂತ ಕಾಲ
ಯಾರೊಡನೆಯೋ ಕಂಡ ಕನಸು
ನೆನಪುಗಳೆಲ್ಲ ಕಡಲಾಗಿದೆ
ಮರೆಯಾಗಿ ಹೋಗು
ಮುಳುಗುವ ನೇಸರನಂತೆ
ತೇರು ಹರಿದು
ಕೊರಗು ಅರಿದು
ಸ್ಪಷ್ಟವಲ್ಲದ ಸಂಬಂಧಗಳು
ನಾಜೂಕಿನ ಬಿರುಕುಗಳು
ಅಗಲಿರಲು ಹೀಗೆ ನಾವು..


-ಹರವು ಸ್ಫೂರ್ತಿಗೌಡ
21-4-2013
ಮೋಡ ಕಟ್ಟುವುದಿಲ್ಲ
ಪ್ರೀತಿ ಹನಿಹನಿ ಸುರಿದು
ಯಾವ ಬರಡು ಹೃದಯವನ್ನೂ
ಚಿಗುರೊಡೆಸುವುದಿಲ್ಲ..

ಬಾನಿಗಾಸೆ ನೆಲದೆಡೆಗೆ
ಬಾಗುವುದೇನೋ
ಮಣ್ಣಿನ ದೀಪದಲ್ಲಿ
ಬೆಳಗು-ಕತ್ತಲಿನ ಆಲಿಂಗನ

ತೀರದ ಬದುಕೇ
ಕಡಲಿನ ತುದಿಯು
ಚಂದ್ರ ಬರುವುದು ಯಾವಾಗ..?

-ಹರವು ಸ್ಫೂರ್ತಿಗೌಡ
22-04-2013
ಮುಳುಗಿದಂಗೆ ಕಳೆದುಕೊ
ನಿಂತ ಸಾಗರದಲ್ಲೇ
ಪ್ರೀತಿ ಹಡಗು ಮುಳುಗಿತ್ತು
ಕೂಗಾಟ, ನರಳಾಟವಿಲ್ಲ
ಮುಳುಗಿದಷ್ಟು ಆಳಕ್ಕೆ ಇಳಿದೆ
ನಿಟ್ಟುಸಿರು..

ನಿನ್ನ ಎದೆ ಮೇಲೆ ನನ್ನ ಎದೆ..

-ಹರವು ಸ್ಫೂರ್ತಿಗೌಡ
23-04-2013
ಕೆಸರು ಗದ್ದೆ ಹಸಿರು ಮನ
ತೆವರಿ ಬದುವಿನಲ್ಲಿ ಸ್ಫಟಿಕ ಹರಿನೀರು
ಕಪ್ಪುಜಡಿ ಮಣ್ಣಿನ ಹರೆಯ
ಹಸನು ಹಸನು..

ನಿನ್ನಕಣ್ ನೇಗಿಲು ಉತ್ತೀತು
ಮನದ ಭೂಮಿ
ಹೃದಯ ತೆರೆದು
ಫಸಲು ಕೊಯ್ಲು..

ಕಣಜ ಬಂಡಿ ಮನೆ ಸೇರಿಲ್ಲ ಇನ್ನೂ
ಮನ ಮನದಲ್ಲಿ ಉರಿವ ಕಿಚ್ಚು
ಸುತ್ತ ಕುಣಿದಾಡುವ ಸಾವು
ಗುರುತು ಸಿಗುತ್ತಿಲ್ಲ
ಜಾತಿ ಮತಗಳ ನಡುವೆ
ಮತಾಂಧರ ಕಣ್ಣು ತೆರೆಸು
ಮಣ್ಣಿನ ಋಣವಿದೆ
ಪ್ರೇಮ ಸರಸ್ವತಿ ಹರಿಯಲಿ
ನನ್ನೂರು-ನಿನ್ನೂರ ಮನದ ನಡುವೆ

ಹಾರಲಿ ಪಾರಿವಾಳ
ನನ್ನ-ನಿನ್ನ ಪ್ರೀತಿ ಗೆಲುವಿಗೆ

-ಹರವು ಸ್ಫೂರ್ತಿಗೌಡ
25-04-2013
ವಾಸ್ತವ ಇನ್ನೂ ತೆರೆದುಕೊಳ್ಳುತ್ತಲೇ ಇದೆ
ನಿನ್ನೊಲುಮೆ ಅರ್ಥವಾದಷ್ಟು
ವಸ್ತುಗಳಿಗೆ ಎರಡು ಮುಖ ಕಾಣಿಸುತ್ತಿದೆ
ನೀತಿಯಿಂದ ಹೊರತಾದದ್ದು
ಮನುಷ್ಯನ ಆಳದ ಸಾಕ್ಷಿಗಳು
ಪ್ರಶ್ನೆಗಳು ಹೇಗೆ ಏಳುತ್ತವೆ!

ನನ್ನದು ಜೀವಿಸುವ ಅಮಲು
ಸತ್ತವನೇ
ಡಿಮೆ ಅಪಾಯಕಾರಿ
ಗುಟ್ಟುಗಳನ್ನೆಲ್ಲ ಸ್ವೀಕರಿಸಿ ಸತ್ತುಹೋಗಿದ್ದ
ಹೊರಗಿನ ಪ್ರತಿ ಸಾವು ನನ್ನೊಳಗೂ...

ಮೌನ ಸ್ಥಿರಪ್ರಜ್ಞೆ ಗದ್ದಲದಿಂದ ತುಂಬಿ ಹೋಗುವ ಭಯ
ಅಸಹ್ಯ "ಜಿದ್ದು"; "ಪ್ರೀತಿಸು" ಎಲ್ಲ ತಾತ್ಕಾಲಿಕ
ಕಾಕತಾಳೀಯ ಮತ್ತು ನಿಗೂಢ
ಇಷ್ಟವೆಲ್ಲಾ ಅನುಷ್ಠಾನವಾಗುತ್ತಿತ್ತು
ಅಗಲಿಕೆ ಅರ್ಥವಾಗಲಿಲ್ಲ, ಪ್ರಯತ್ನಿಸಲೂ ಇಲ್ಲ
ಪ್ರೀತಿಯ ತಂಪೆರೆಯುತ್ತಿದ್ದ ಮಳೆಗೂ ಸಿಟ್ಟು
ಗುಡುಗಿ, ಕೆಂಡದಂತೆ ಬ್ಧ ಆರ್ಭಟ
ಮಳೆ ಹನಿಯಲಿಲ್ಲ ಭೂಮಿ ಬಿಕ್ಕಳಿಸುತ್ತಿದ್ದಳು...
ಒಂದು ದಿನ ಪೂರ್ಣ ನೀಲಿ ಆಕಾಶ
ಕಚ್ಚಿದ ಬಾನಿನ ತುಣುಕು ಕೈಯಲಿ..

-
ಹರವು ಸ್ಪೂರ್ತಿಗೌಡ

07-06-2013(11.35 pm)

ಬುಧವಾರ, ಮೇ 15, 2013

ಗುಂಗು

ನೀ ತಬ್ಬಿದಷ್ಟು ಗಟ್ಟಿಯಾಗಿ
ಉಸಿರುಕಟ್ಟಿ ಮೈಬಳಸುವೆ
ತುಟಿ ಹೀರಿದಷ್ಟೂ
ಮಧು ಬಟ್ಟಲು
ಕಚ್ಚಿದಷ್ಟೂ ತಿನ್ನಲಾರದ ರಸಹಣ್ಣು
ನಿದ್ದೆ ಹತ್ತಿದರು
ಮಗ್ಗಲು ಬದಲಾಯಿಸಿ ಹೊರಳಾಡಿ
ತೀರದ ತೃಪ್ತಿ ನಡುವಿಗೆ
ಕತ್ತಲೆಯೇ ನೆಮ್ಮದಿ
ಕೆಂಪು ನೆಲದ ಕನಸುಗಳಂತೆ
ಗಿಜುಗ ಗೂಡಿನ ಗುಂಗಿನಂತೆ

    -
ಹರವು ಸ್ಫೂರ್ತಿಗೌಡ

ಮಂಗಳವಾರ, ಮೇ 14, 2013

ರಾಧೆಯೆಲ್ಲಿ?

ಲೀಲೆಯಲ್ಲಿ ಮೈಮರೆಸಿ
ವಿಶ್ವರೂಪವ ತೋರಿದ ಗೋಕುಲ
ರಾಧೆಯ ಕಥೆ..?

ಇಂದಿಗೂ ನಿಗೂಢ ಇತಿಹಾಸ
ಯಮುನಾ ತೀರದಲ್ಲೇ
ಉಳಿದು ಹೋದಳೇ ರಾಧೆ..!


-ಹರವು ಸ್ಫೂರ್ತಿಗೌಡ
27-04-2013
ಕಳೆದು ಹೋದ ಕೊನೆಯ ಸಾಲು..

ಪಿತೃ ಮೂಲದ ಬೇರು ನಾನು
ಸ್ವತಂತ್ರವಾಗಿ ಅರಳಿದರೂ
ಮನೆಯಂಗಳದಲ್ಲೇ
ಉದುರಿ ಬಿಳುವ ಹೂ
ಜೀವನ ಪ್ರೀತಿ ಇಲ್ಲ
ಯಾಂತ್ರಿಕ ಮನಸ್ಸು
ಅಪರೂಪಕ್ಕೊಮ್ಮ
ಅವತರಿಸುವ ನಗೂವು ನಿನ್ನದೇ..!
ನಾನೆಲ್ಲೋ ನಡೆದೆ 161ವರೆ ದಿನವೂ..
ಕಪ್ಪು ಹುಡುಗಿಯ ಬಳಿ
ಬಣ್ಣ ಕೇಳಬೇಡ
ಎಲ್ಲದಕ್ಕೂ ಕಾರಣಬೇಕು
ಕಳೆದುಕೊಂಡ ಕೊನೆಯ ಸಾಲಿಗೂ..  


-ಹರವು ಸ್ಫೂರ್ತಿಗೌಡ  
 26-04-2013

ಮಂಗಳವಾರ, ಏಪ್ರಿಲ್ 23, 2013

ಎದೆಯು ಮರಳಿ ತುಡಿಯುತಿದೆ
ಎಂದೋ ನಿಂತಿತೆಂದರೆ
ಬಳ್ಳಿ ಬಾಳು ಹಬ್ಬಲು
ಅರಳಿ ಹೂ ನಗಲು
ಎಲ್ಲೋ ನಿಂತ ಕಾಲ
ಯಾರೊಡನೆಯೋ ಕಂಡ ಕನಸು
ನೆನಪುಗಳೆಲ್ಲ ಕಡಲಾಗಿದೆ
ಮರೆಯಾಗಿ ಹೋಗು
ಮುಳುಗುವ ನೇಸರನಂತೆ
ತೇರು ಹರಿದು
ಕೊರಗು ಅರಿದು
ಸ್ಪಷ್ಟವಲ್ಲದ ಸಂಬಂಧಗಳು
ನಾಜೂಕಿನ ಬಿರುಕುಗಳು
ಅಗಲಿರಲು ಹೀಗೆ ನಾವು


  -ಹರವು ಸ್ಫೂರ್ತಿಗೌಡ
ಬರೆದಷ್ಟೂ ತೀರದು
ನೋಡಿದಷ್ಟೂ ಪ್ರೀತಿ
ಕಣ್ಮುಚ್ಚಿದಷ್ಟೂ ಕನವು
ಮರಳಿ ಪಡೆಯುವುದಷ್ಟೇ ಬಾ
ಮುಗಿಯದ ರಾತ್ರಿ ತುಂಬ
ತೀರದ ಬಾಳಿನ ತುಂಬ

 -ಹರವು ಸ್ಫೂರ್ತಿಗೌಡ
ಹರಿಯದ ಪ್ರೀತಿ ನೀರು
ನಿಂತಿತು ಮನದಲ್ಲಿ
ಕೊಳದೊಳಗೆ ಜಾರಿದಂಗೆ
ಜಾರಿದೆ.. ಕಾಣದಾದೆ
ನನ್ನದೇ ಹೃದಯ ಕೊಳದೊಳಗೆ
ಎಲ್ಲವನ್ನ ಖಾಲಿ ಮಾಡಬೇಕಿದೆ
ಒಂದೊಂದೇ ಹನಿ ಹರಿಸಿ
ಕಣ್ಣಿನಿಂದ...

- ಹರವು ಸ್ಫೂರ್ತಿಗೌಡ
ಬಿರುಬಿಸಿಲಿನಲ್ಲಿ ನಡೆದ ನೆನಪು
ಭಾರೀ ರಣಹದ್ದು ಕಣ್ಣುಗಳು
ಕೆಂಪಿನ ಹೂ ನಡುವೆ
ಮೋಸದ ಮುಳ್ಳುಗಳು
ನಂಬಬೇಡ ಎನ್ನುವ
ಬುದ್ಧಿಯ ನಡುವೆ
ಮರೆಯಲಾರೆ ಎನ್ನುವ ಹೃದಯ
ಯಾರನ್ನ ಕೇಳಲಿ…?

 -ಹರವು ಸ್ಪೂರ್ತಿಗೌಡ