ಶನಿವಾರ, ಸೆಪ್ಟೆಂಬರ್ 28, 2013

ಒಂದೊಂದು ಹುಚ್ಚು..

ಹುಚ್ಚರ ಸಂತೇಲಿ ಪ್ರೀತಿ ಹಂಬಲವು ಹುಚ್ಚೇ
ಎಲ್ಲರಲ್ಲಿ ಒಂದಾಗುವ ನನ್ನದು ಹುಚ್ಚೇ
ಗಿಡ ಬಳಿ ಮರ ಹಕ್ಕಿ-ಪಿಕ್ಕಿಗಳಿಗೂ ಹುಚ್ಚು
ವಿಜಯನಗರ ಸಿರಿ-ಹೊಯ್ಸಳ ಕಲೆಗೂ ಹುಚ್ಚು

ನದಿಯಾಗಿ ಒಡಲಲ್ಲಿ ಹರಿದೆ ದಾಹದ ಹುಚ್ಚಿಗೆ
ಕಥೆಯಾಗಿ ದೀಪಗಳಿಂದರಳಿದೆ ಕನಸಿನ ಹುಚ್ಚಿಗೆ
ಹಾಡಾಗಿ ಮೆರವಣಿಗೆ ಬಂದೆ ಅಮಲಿನ ಹುಚ್ಚಿಗೆ
ಬೆನ್ನಾಗಿ ಬಾಯಿಗೆ ಸಿಕ್ಕೆ ಕಚ್ಚುವ ಹುಚ್ಚಿಗೆ

ಹಂಬಲಿಸಿದವರು ಯಾರು ಸಿಗದ ಹುಚ್ಚು
ಹಂಬಲಿಸಿದ ಯಾರಿಗೂ ದೊರೆಯದ ಹುಚ್ಚು
ಕುದುರೆ ಏರಿ ಬರುವವನಿಗೆ ಮೀಸಲಾದ ಪ್ರಣದ ಹುಚ್ಚು
ಕಣ್ಣಲ್ಲಿ ಪ್ರೀತಿ ತುಂಬಿ ಕಾಡೋನೊಬ್ಬ
ನನ್ನ ಮೆಚ್ಚಿದ ಹುಚ್ಚರಲ್ಲಿ ಅವನು ಒಬ್ಬ
-ಹರವು ಸ್ಫೂರ್ತಿಗೌಡ
25-09-2013(8.55)

ಭಾನುವಾರ, ಸೆಪ್ಟೆಂಬರ್ 22, 2013

ಜೋಡಿಹಕ್ಕಿ
**************************
ಎದೆಯ ಒಳಗೆ ಕಾವು ಕೂತ ಬಾನುಲಿ
ಮೊಟ್ಟೆ ಒಡೆದ ಮಾರಿಯ ಕಣ್ಗೆ ಕಾಣಸಿಗದೆ ಹೋದೆ ನೀ

ಪ್ರೀತಿ ಹಸಿವಿಗೆ ಚಿವ್ ಗುಡುವ ಹಕ್ಕಿಮರಿ
ಬಾಯಿ ಬಿಟ್ಟ ಕೆಂಪು ಕೊಕ್ಕ ಮುದ್ದಿಸದೆ ಹೋದೆ ನೀ

ಬಾನ ತಾಕುವರೆಗೂ ಎಳೆದುಕೊಂಡು ಸ್ವರಗಳು
ನೆತ್ತಿ ನಿಲ್ಲದ ಕುತ್ತಿಗೆಯ ಬೆಂಬಲ ನಿಲ್ಲದೆ ಹೋದೆ ನೀ...

ಆಕಾಶಕ್ಕೆ ಕೈಚಾಚಿ ಕೂಗಿ ಬಿಳುವ ರೆಕ್ಕೆಗೆ
ಕೈ ಹಿಡುದು ಬಿಗಿದುಕೊ ಎದೆ ಬಿಸಿಬೆಚ್ಚಗೆ

ಪುಟ್ಟ ಪಾದ ತಡವರಿಸಿ ಪ್ರೀತಿ ಹುಡುಕಿದೆ
ಕೆರೆದು ಕೆರೆದು ಪ್ರೀತಿ ಸಿಗದೆ ಗೂಡು ತೂತು ಬಿದ್ದೆ

ಆನಾಥ ಹಕ್ಕಿಮರಿ ಅಣ್ಣಅಕ್ಕರಿಲ್ಲ ಗೂಡಲ್ಲೇ ಒಂಟಿ
ಹಾವು ನುಂಗುವ ಭಯಕೋ ಹೃದಯ ರಕ್ತ ಚಿಮ್ಮಿದೆ

ಮಳೆ ಗುಡುಗಿಗೆ ಹಾರಿ ತೇಲಿ ಮುಳುಗುತಿಹದು ಬದುಕ ಗೂಡು
ದಡಕ್ಕೆ ತುಂದು ಚಂಡಿ ಮರಿಯ ತಲೆವರೆಸಿ ಶಾಖ ನೀಡು

ನುಣುಪು ಮೈಗೆ ರೆಕ್ಕೆ ಮೂಡಲಿ ಗೆಳೆಯ
ಹುಳುವ ಹೆಕ್ಕಿ ತಂದು ಪ್ರೀತಿ ಗುಟುಕ ನೀಡು ಬಾ
ಸ್ವತಂತ್ರವಾಗಿ ರಕ್ಕೆ ಬಡಿದು ಹಾರಿ ಹಾರಿ ಜೋಡಿಹಕ್ಕಿಯಾಗುವ

-ಹರವು ಸ್ಫೂರ್ತಿಗೌಡ
18-09-2013 (7.40 am)
ಮುಗ್ಗಲು ಮಳೆ ಸುರಿವ ಗಮಲಿಗೆ ಗೆಳತಿ
ಮಗ್ಗಲು ಬದಲಿಸದೆ ನನ್ನ ತಬ್ಬಿ ಮಲಗೂತಿ
ನೇರಳೆ ಹಣ್ಣಿನ ನೆ(ನ)ಪಲ್ಲಿ ಗೆಳತಿ
ನಿನ್ನ ತುಟಿ ತಿನ್ನುವ ಆಸೆ ಪಕ್ಕಕ್ಕೆ ಬರುತಿ
-ಹರವು ಸ್ಫೂರ್ತಿಗೌಡ
ಸಾಯಬೇಕಾಗಿದೆ!
*****************
ಸಾವೇ ನೀನೆಷ್ಟು ಸರಳ-ನೆಮ್ಮದಿ
ನನ್ನನೊಮ್ಮೆ ಅಪ್ಪಿ ನಿನ್ನ ತೊಳಲ್ಲಿ ಬಂಧಿಸು
ನನ್ನಾತ್ಮ ನಿನ್ನಲಿ ಲೀನವಾಗಲಿ
ನಿನ್ನದೊಂದು ಸುಧೀರ್ಘ ಕತ್ತಲು
ಯಾರು ಕಾಣದೇ, ಏನೂ ಬಾರದೇ
ನಿಶಬ್ಧ ನಿಶ್ಚಲವಾಗಿರಲು ನಾನು-ನೀನು

ವಾಸ್ತವತೆಯ ಭೀಕರತೆಗಳು ಕಪ್ಪು ರಂಧ್ರದಲ್ಲಿ...
ಪ್ರೀತಿ-ಬದುಕು-ಸಾವು ಇವುಗಳ ಗ್ರಹಿಕೆ ಒಂದೇ
ಬದಕಿನಲ್ಲೂ ದೂರದಲ್ಲಲ್ಲೆಲೊ ಹೊಳೆಯುವುದೇ
ಒಮ್ಮೆ ಸತ್ತು ನೋಡಬೇಕು..!

-ಹರವು ಸ್ಫೂರ್ತಿಗೌಡ
20-09-2013(12.20pm)

ಶನಿವಾರ, ಸೆಪ್ಟೆಂಬರ್ 14, 2013

ಧರ್ಮ

ಅಚ್ಚಿನ ಮೊಳೆ ಖಾನೆಯಲ್ಲಿ ಸಿಕ್ಕಿ
ನಾನು ಹಿಂದೂ, ಕ್ರೈಸ್ತ, ಮುಸ್ಲೀಮನಾಗಿ
ವ್ಯಾಕರಣದ ವಿಭಕ್ತಿಗಳಷ್ಟೇ ನಿಸ್ಠೆಯಿಂದ
ಮಾರ್ಜಾಲ ಧರ್ಮಗಳನ್ನು ಪಾಲಿಸುತ್ತ

ಶೈಶವತನದಲ್ಲೇ ಮುಗ್ಧತೆ ಮುಗಿಸುವ ಧಾರ್ಮಿಕ ಪಾಠಗಳು
ಮೃದ್ವಸ್ಥಿ ಮೇಲೆ ನಕಾಶೆ ಬಿಡಿಸುವ ಕಲೆಯಂತೆ
ಧರ್ಮ ಉದ್ಘರಿಸುತ್ತಾ.. ಅಕಾರಾದಿಗಳಲ್ಲಿ
ಪ್ರಚೋದಿಸುತ್ತ, ಅರಳ ಬೇಯಿಸಿ ಕೈಯೆಣ್ಣೆ ಪಡೆ

ಕ್ರಿಸ್ತನ ಶತ್ರುವನ್ನು ಪ್ರೀತಿಸುವ ಕಲೆ ಕಲಿಯಲಿಲ್ಲ
ರಾಮನ ರಾಜ್ಯ ಪಾಲನೆ ಕಲಿಯದೆ ಭ್ರಷ್ಟರಾದಿರಿ
ಅಲ್ಲಾನ ಒಗಟ್ಟು ಕಲಿಯದೆ ಹೊಡೆದಾಡಿದಿರಿ
ಉಗ್ರ ಆಸೀಫ್​, ಕೋಮು ರಾಮ, ಪ್ರಚೋದಕ ಜೋಸೆಫ ಆದೆರೆಲ್ಲ

ಅಲ್ಲಾಹುವಿನ ರಾಸಯನಿಕ ದಹಿಸುತ್ತಿರುವ ದೇಶ ಉಳಿಸೆಂದೆ
ರಾಮನ ಮುಂದೆ ಸೀದು ಹೋದ ತ್ರಿಕರಣ ಶುದ್ಧಿಯ ಕೇಳಿದೆ
ಇಗರ್ಜಿ ಮುಂದೆ ಮುಂಬತ್ತಿ ಹಚ್ಚಿ ಕ್ರೈಸ್ತನ್ನನು ಎಳೆದಾಡಿದೆ
ಯಾವೊಬ್ಬ ದೇವನು ಉಸಿರಾಡಲಿಲ್ಲ
ಒಡೆದ ಹಡಗಿನಿಂದ ಜೀವಂತ ಉಳಿದವನಾದೆ

-ಹರವು ಸ್ಫೂರ್ತಿಗೌಡ
15-09-2013(4.14am)

ಶುಕ್ರವಾರ, ಸೆಪ್ಟೆಂಬರ್ 13, 2013

ನಿರ್ಲಿಪ್ತತೆ

ನಿನ್ನ ನೆನಪಿಲ್ಲ
ಗಾಳಿ ಗಂಧವಿಲ್ಲ
ನಿದ್ದೆಯಲಿ ಕರಗಿಸುವ
ಮೋಹವಿಲ್ಲ
ನಿರ್ಲಿಪ್ತತೆ!!
ಯಾರೋ ಕೂಗಿದರು
ಕಲ್ಲು ಹೃದಯ

-ಹರವು ಸ್ಪೂರ್ತಿಗೌಡ
ಭಾವನೆಗಳು ಅರ್ಧವಾಗದಿರಲಿ
ಸಂಬಂಧಗಳು ಬಟ್ಟೆಕಳಚಿ ಬೆತ್ತಲಾಗದಿರಲಿ
ಅಪಾರ್ಥಗಳು ನಿಜವಾಗದಿರಲಿ
ಏನಿಲ್ಲ ಎನಿಸುವುದು ಪಲಾಯನವಲ್ಲ
ನಿರಂತರ ಪ್ರತಿಭಟನೆ
ಏನಿಲ್ಲ ಎನಿಸುವ
ಖಾಲಿ ಹುಡುಗಿಯೊಂದಿಗೆ
ಭಾವಗಟ್ಟಿ ಗುದ್ದಾಡಬೇಡ
ಕಲ್ಲು ಬಂಡೆಗೆ ತಲೆ ಚಚ್ಚಿದಂತೆ
ಬಂಡೆ-ತಲೆ ಯಾವುದು ಒಡೆದರು...
ನೀನೇ ಜವಾಬ್ದಾರ..

-ಹರವು ಸ್ಫೂರ್ತಿಗೌಡ
4-5-2013
ವಾಸ್ತವ ಇನ್ನೂ ತೆರೆದುಕೊಳ್ಳುತ್ತಲೇ ಇದೆ
ನಿನ್ನೊಲುಮೆ ಅರ್ಥವಾದಷ್ಟು
ವಸ್ತುಗಳಿಗೆ ಎರಡು ಮುಖ ಕಾಣಿಸುತ್ತಿದೆ
ನೀತಿಯಿಂದ ಹೊರತಾದದ್ದು
ಮನುಷ್ಯನ ಆಳದ ಸಾಕ್ಷಿಗಳು
ಪ್ರಶ್ನೆಗಳು ಹೇಗೆ ಏಳುತ್ತವೆ!
ನನ್ನದು ಜೀವಿಸುವ ಅಮಲು
ಸತ್ತವನೇ ಕಡೆಮೆ ಅಪಾಯಕಾರಿ
ಗುಟ್ಟುಗಳನ್ನೆಲ್ಲ ಸ್ವೀಕರಿಸಿ ಸತ್ತುಹೋಗಿದ್ದ
ಹೊರಗಿನ ಪ್ರತಿ ಸಾವು ನನ್ನೊಳಗೂ...
ಮೌನ ಸ್ಥಿರಪ್ರಜ್ಞೆ ಗದ್ದಲದಿಂದ ತುಂಬಿ ಹೋಗುವ ಭಯ
ಅಸಹ್ಯ “ಜಿದ್ದು”; “ಪ್ರೀತಿಸು” ಎಲ್ಲ ತಾತ್ಕಾಲಿಕ
ಕಾಕತಾಳೀಯ ಮತ್ತು ನಿಗೂಢ
ಇಷ್ಟವೆಲ್ಲಾ ಅನುಷ್ಠಾನವಾಗುತ್ತಿತ್ತು
ಅಗಲಿಕೆ ಅರ್ಥವಾಗಲಿಲ್ಲ, ಪ್ರಯತ್ನಿಸಲೂ ಇಲ್ಲ
ಪ್ರೀತಿಯ ತಂಪೆರೆಯುತ್ತಿದ್ದ ಮಳೆಗೂ ಸಿಟ್ಟು
ಗುಡುಗಿ, ಕೆಂಡದಂತೆ ಶಬ್ದ ಆರ್ಭಟ
ಮಳೆ ಹನಿಯಲಿಲ್ಲ ಭೂಮಿ ಬಿಕ್ಕಳಿಸುತ್ತಿದ್ದಳು...
ಒಂದು ದಿನ ಪೂರ್ಣ ನೀಲಿ ಆಕಾಶ
ಕಚ್ಚಿದ ಬಾನಿನ ತುಣುಕು ಕೈಯಲಿ..

-ಹರವು ಸ್ಪೂರ್ತಿಗೌಡ
07-06-2013(11.35 pm)
ಅವ ದೀಪದಂತೆ ಉರಿಯುತ್ತಾನೆ
ಈಕೆ ಬೆಳಗಿನಂತೆ ಪಸರಿಸುತ್ತಾಳೆ
ಎಲ್ಲೆಡೆ ಕ್ರೂರ ನಿಶ್ಯಬ್ದ
-ಹರವು ಸ್ಫೂರ್ತಿಗೌಡ
ಜಾತಿ ಮೂಲಭೂತ ಜಿಜ್ಞಾಸೆಯೇ ಶಿವಾ
ಅದ್ವಿತ ಧೋರಣೆಎಂದಾಗಲ್ಲಿಲ ಶಿವಾ
ನಾಥನಂತೆ ಉಳಿವ ಹಂಬಲವಾಗಲ್ಲಿಲ ಶಿವಾ
ವೀರಶೈವನಾಗಿ ಉಗಮಿಸುವ ಅಹಂ ಇಲ್ಲ ಶಿವಾ
ಮಾಡುವ ತಪ್ಪಿಗೂ ಜಾತಿನುಸಾರ ಶಿಕ್ಷೆ ಯಾಕೆ ಶಿವಾ
ವ್ಯಾಮೋಹವೇ ಪ್ರಪಂಚದ ದುಖಃವೆಂದ ಶಿವಾ
ನನ್ನೆದೆಯಲಿ ನೀನೆ ಶಿವ ಲಿಂಗ ಕಟ್ಟಬೇಕ್ನೆನಲಿಲ್ಲ ನನ್ನ ಶಿವಾ

-ಹರವು ಸ್ಫೂರ್ತಿಗೌಡ
29-06-2013 (10.57 pm)
ಬರಡು ಭೂಮಿಯನ್ನು
ಮರುಭೂಮಿಯನ್ನಾಗಿಸಿದ
ಮಳೆಗೆ ಕೊನೆಗೊಂದು

ಧನ್ಯವಾದ....
ವಿದಾಯ.....

-ಹರವು ಸ್ಫೂರ್ತಿಗೌಡ
29-06-2013 (7.10)
ಅತೀತವಾದ

ಬಾಗಿಲ ಬಳಿ ಉರಿವುದಂತೆ ದೀಪ
ಯಾರೋ ಬರುವಿಕೆ, ಯಾವುದೋ ಅಗಲಿಕೆ
ದಾರಿ ಹಸಿಯಾಗಿಸುತಿರುವುದು ಇಂದು
ಭಾವಿಸಿ ಬರುವವಳಂತೆ ನನ್ನೆದೆ ಬೃಂದಾವನ ಬೆಳಗಲು

- ಹರವು ಸ್ಫೂರ್ತಿಗೌಡ
ಚುಕ್ಕಿ ಮುತ್ತಂತೆ

ರಾತ್ರಿ ಪೂರ್ತಿ ಪ್ರಪಂಚ ಪ್ರೀತಿಯಲ್ಲಿ ಮುಳುಗಿ
ನಕ್ಷತ್ರದಂತೆ ತುಂಡುತುಂಡಾಗಿ ಹರಡಿ ಹೊಳೆಯುವಾಗ
ಬೆಳಕು...
ಸೂರ್ಯನನ್ನು ಕಾಡಿಸಬೇಕು ರಾತ್ರಿ ಮರಳಿಸಲು
ಖಾಲಿ ಆಕಾಶ ನೀಲಿ ಹಾಳೆ ನೀಡಲು
ಮನಬಂದಂತೆ ಮುತ್ತಿನ ಚುಕ್ಕಿ ಇಡುವ...
ಕೋಟ್ಯಾಂತರ 'ಚುಕ್ಕಿ' ಇಟ್ಟರು ದಣಿಯಲಿಲ್ಲ ಇಬ್ಬರು
ಮತ್ತದೇ ರಾತ್ರಿ ಪೂರ್ತಿ ಪ್ರಪಂಚ ಪ್ರೀತಿಯಲ್ಲಿ ಮುಳುಗಲಿ.....

-ಹರವು ಸ್ಫೂರ್ತಿಗೌಡ
17-07-2013 (8.36)
ಉದ್ದೇಶವಾಗಿತ್ತು...

ಗಾಂಧಿಯಿಂದ ಗೋಡ್ಸೆವರೆಗೆ ಎಲ್ಲರೂ ಸತ್ತರು
ರಘುಪತಿ ರಾಘವರಾಜಾರಾಮ್.. ಕಂಠಗಳು ಸ್ತಬ್ಧವಾದವು
'ಅಖಂಡ ಭಾರತ' ನಿರ್ಮಿಸುವ 'ಜೈಶ್ರೀರಾಮ್'ಗಳು ಮೋಳಗಿದವು
ಪಾಕ್ನಲ್ಲಿ ಸಿಖ್ಖ್ರು ಅನುಭವಿಸಿದ ಗುಲಾಮಗಿರಿಗಾಗಿ
ಭಾರತದಲ್ಲಿ ರಾಮಂದಿರು ಯಜಮಾಗಿರಿ ನಡೆಸಿದರು
ಅಹಿಂಸೆ ಹೋರಾಟಗಳು ವ್ಯರ್ಥವಲ್ಲವೆಂದಿದ್ದು
ಅಹಿಂಸೆಗಳೆಲ್ಲಾ ವಿಕೃತ ಹಿಂಸೆಗಳಾಗಿ
ಪ್ರಜಾಪ್ರಭುತ್ವವನ್ನು ಭೋಗಿಸುತ್ತಾ...
ನನ್ನಕ್ಕನನ್ನು ಹರಿದು ಚಿಂದಿಯಾಗಿಸಿ ತಿಂದಾಗ
ಅಹಿಂಸೆ ಸ್ವತಂತ್ರಯುಗದ ದಂತಕಥೆ ಆಯ್ತ

ಯಾರು ಸತ್ತರೆ ದೇಶಕ್ಕೆ ಏನು?
ನಮ್ಮ ಮನೆ ಮಕ್ಕಳು ಉಂಡು ಮಲಗಿದರು
ಸಾಯಬೇಕಾದವರು ಸತ್ತರು, ಆತ್ಮಗಳಾಗಿ ಹಾರಿದರು
ಶ್ರಮಿಕನ ಶ್ರಮದಲ್ಲೇ ಅಧಿಕಾರ ಗಿಟ್ಟಿಸಿಕೊಳ್ಳುವವನು
ಜಾತಿ ಪಟ್ಟಿ ಅಂಟಿಸಿ, ಒಡೆದು ಆಳುವವನು
ಹಸಿದ ಹೊಟ್ಟೆಗಳಿಗೆ ಸಾರಾಯಿ ಹಂಚುವವನು
ಚಿತೆಯಲ್ಲಿ ರಾಜಕೀಯ ಅನ್ನ ಬೇಯಿಸುವವನು..
ಉತ್ತುವ ಭೂಮಿ ನುಂಗುವವನು
ಉಳಿದುಕೊಂಡರು..
ಉದೇಶವಿತ್ತಾ ‘ಮಹಾನ್’ ಸಾವಿಗೆ?

-ಹರವು ಸ್ಫೂರ್ತಿಗೌಡ
18-08-2013(5.30)
ಬಿಟ್ಟಿರಲಾರದೆ ಬಾಗಿದೆ ಮುಗಿಲು
ಸೇರಲಾರದೆ ಸುತ್ತಿ ಗುಂಡಾಗಿದೆ ಭೂಮಿ
ನಡುವೆ ಎಂಥದೋ ಖಾಲಿ ಸಂಬಂಧ
ಬಣ್ಣ ಭರಿಸಲಾಗದ ಕಾಮನಬಿಲ್ಲು
ಕಡು ಕಾಪಿಟ್ಟ ಭೂಮಿಯ ಒಡಲು
ಕರಗಿತೇ ಮುಗಿಲು ಸುರಿವುದೇ ಮಳೆ
ಭೂಮಿ ಒಡಲಲ್ಲೇ ನದಿ, ಹಳ್ಳ, ಕೊಳ್ಳ
ಹರಿದು ತನು-ಮನ ತೊಯ್ದರು
ಯಕಶ್ಚಿತ್ ಮಳೆ ನೆಚ್ಚಿಕೊಂಡಿದ್ದೇಕೆ
ಭೂಮಿಗೂ ಸಮುದ್ರದ ಉಪ್ಪು ಬಸಿರ ಬಯಕೆ...

-ಹರವು ಸ್ಫೂರ್ತಿಗೌಡ
(21-08-2013)

ಗುರುವಾರ, ಸೆಪ್ಟೆಂಬರ್ 12, 2013

ಧ್ವನಿಗ್ರಹಣ​

ಕೂಗಿಕೊಂಡೆ ಕೇಳಿತು ಬಿಡು
ಅನಾಥವೋ, ಅಗಲಿಕೆಯ ತರಂಗಗಳಂತೆ
ನಾನು ಅವಳಿಗೆ ಅಂದುಕೊಂಡೆ
ಅವಳು ನನಗೆ ಅಂದುಕೊಂಡಳು
ಕೇಳಿಸಿಕೊಳ್ಳದಂತೆ ಮನ ಗೋಜಲಾಯಿತು
ನೀನು ಕೂಗಿದ್ದು ನನಗೋ-ಅವಳಿಗೋ..?
-ಹರವು ಸ್ಫೂರ್ತಿಗೌಡ
13-09-2013 (7.7am)

ಸೋಮವಾರ, ಸೆಪ್ಟೆಂಬರ್ 2, 2013

ಕವಿತೆಗಳೇ ಹಾಗೆ..

ಮುರಿದ ಮನಸ್ಸಿನ ಶಬ್ದ
ಸುರಿದ ಕಣೀರಿನ ಸ್ಫೂರ್ತಿ
ಹಸಿದ ಬಗರಿ ಮೂಳೆ
ಕೊಂಕಿದ ಗಂಡಸಿನ ಬುದ್ಧಿ
‘ದಾನಿ’ಗಳ ಹಣದ ಧಿಮಾಕು
ಸಂತೆಯಲ್ಲಿ ಕಳೆದುಕೊಂಡ ಮಾನ
ಕೊಳೆಯುತ್ತಿರುವ ಹುಳುಕು ಸಮಾಜ
ಚುಡಾಯಿಸಿದ ಹುಡುಗನ ನೆನಪು...
ಕೈಗೆ ಎಟುಕದ ಚಂದ್ರ
ನಿರಾಕಾರಗೊಂಡ ಮುಗಲು ಗುಲಾಬಿ
ಕವಿತೆಗಳೇ ಹಾಗೆ..ಕವಿತೆಗಳೇ ಹಾಗೆ..
ನತದೃಷ್ಟ ಭಾವಗಳೇ ಯಶಸ್ವಿ ಕವಿತೆಗಳು

-ಹರವು ಸ್ಫೂರ್ತಿಗೌಡ
01-09-2013(4.6pm)
ಹೋಗಲಿ ಬಿಡು

ನನ್ನ ಮೌನವೇ ನಿನಗೆ ಕೋಪ
ನಿನ್ನ ನಿರ್ಲಕ್ಷ್ಯವೇ ನನ್ನ ಮೌನ
ಆತ್ಮವಿಶ್ವಾಸ ಬಂದೊಡನೆ ಬಂದುಬಿಡು
ಅದೇ ದಾರಿಯಲ್ಲಿ, ಅದೇ ಬೀದಿಯಲ್ಲಿ
ಕಾಯುತ್ತಿಲ್ಲ, ಕಾದು ಬೇಜಾರಾಗಿಲ್ಲ
ಸುಮ್ಮನೆ ನಿಂತಿದ್ದೀನಿ ಬರುವಿಕೆಗಾಗಿ
ಬರಲಾಗದಿದ್ದರೆ ಹೋಗಲಿ ಬೀಡು
ಕಣ್ಣ ಕಸದಂತೆ ತೆಗೆದುಬಿಡು...
ನನ್ನ-ನಿನ್ನ ಭೇಟಿಯನ್ನೇ ಮರೆತು ಬಿಡು

-ಹರವು ಸ್ಫೂರ್ತಿಗೌಡ
31-08-2013(10.36)
ಅವ ಕಣ್ಣು ಮಿಟುಕಿಸಿದ
ನಾನು ಕಣ್ಣು ಅರಳಿಸಿದೆ
ನುಲಿದ, ನಾಚಿದೆ
ಗಡ್ಡ ನಿವಿರಿ, ತಲೆಕೆರೆದುಕೊಂಡ...
ತಲೆ ಬಗ್ಗಿಸಿ ಎದೆ ನೋಡಿಕೊಂಡೆ
ಪಡೆದವನಂತೆ ಶರ್ಟ್ ಗುಂಡಿ ಮುಟ್ಟಿಕೊಂಡ
ಸಿಕ್ಕವಳಂತೆ ಕಿವಿ ಸವರಿ ಓಲೆ ಮುಟ್ಟಿದೆ
ಕೈಕಟ್ಟಿ ಎದೆಗೆ ಒತ್ತಿಕೊಂಡ
ಬಿಗಿದಂತೆ ನಿಧಾನಿಸಿ ಉಸಿರೆಳೆದೆ
ತುಟಿ ತೆರೆದು ಗಾಳಿಯಲ್ಲಿ ತೇಲಿಸಿದ
ತುಟಿ ಮುಚ್ಚಿ ನಾಚಿ ಎದ್ದು ಹೋದೆ..

-ಹರವು ಸ್ಫೂರ್ತಿಗೌಡ
ಎರಡೇ ಗುಂಡಿ
=====================
ಅವಳಿಗೇನೋ ಬಿಗಿತ ಇವನಿಗೇನೋ ಸೆಳತ
ಬಿಚ್ಚಿ ಹೋಗಿದ್ದು ಬ್ಲೌಸ್ನ ಎರಡು ಗುಂಡಿ
ವಯಸ್ಸಿನ ಸಾಕ್ಷಿ, ಹಿಸುಕಾಡಿದ ಕಲೆ
ತೂಗು, ನಿಲ್ಲಲಾಗದೆ ಅರ್ಧ ಹೊರಕ್ಕೆ
ಸೆರಗೆಸೆದು ಬಿಗಿದರೂ, ಮೇಲೆತ್ತಿ ಮುಚ್ಚಿದರೂ
ತೆಳುವ ಪದರಗಳ ಮಧ್ಯವೇ ಕಣ್ಣ

ನಸುಕಿನ ಪೇಟೆಯ ಮಧ್ಯೆ ನಿಂತು ‘ಮಧ್ಯ’ ನೋಡುವ...
ಸಪ್ಪೆ ಆಸೆಗಳು ಮನದಲ್ಲಿ ತುಂಬಿ..
ದೇಹದ ರಕ್ತವೆಲ್ಲಾ ಮುಖ ನರಗಳಲ್ಲಿ ಹರಿದು
ಹಿಡಿಸಲಾರದ ಅಸಹ್ಯ ನಾಚಿಕೆ, ಬೇಡವಾಗಿತ್ತೇನೋ
ತಿಳಿದವನಂತೆ ನಗು, ಬಯಲಾಯಿತ ಭಯ

ರಾತ್ರಿ ಬಂದು ಹೋದ ಮಳೆ ನೆನಪಲ್ಲೇ
ರಸ್ತೆ ಮಧ್ಯೆ ನಿಂತ ಕೊಚ್ಚೆ ಗುಂಡಿಗೆ ಉಗಿದಳು
ಕೊಳಕು.. ಕೊಳಕು.. ಕೊಳಕು ಜನ..

-ಹರವು ಸ್ಫೂರ್ತಿಗೌಡ
(23-08-2013 11.20 pm)