ಬುಧವಾರ, ಮಾರ್ಚ್ 27, 2013

ನಿನೊಂದು ಬಿಳಿ ಚುಕ್ಕೆ

ನಿನ್ನದೊಂದೇ ಸೂರಿನಡಿ
ಎಷ್ಟೋ ಪ್ರೇಮಿಗಳ
ವಿರಹ ಕರೆಸಿ
ಕಳ್ಳನಗೆ ಬೀರುವೆ
ನಿನೊಡಲಲ್ಲಿ ಪುಂಜರಾಶಿ
ನಾನೆಷ್ಟು ಬಾರಿ ನಿನ್ನ
ಗುರಾಯಿಸಿದ್ದೇನೆ
ಏನಂತಾ ಪುಳಕ
ಏನಿಲ್ಲ ಹೊಳಪು
ಕಡು ನೀಲಿಕಪ್ಪಿನ ಮೈಯಲ್ಲಿ
ನಿನೊಂದು ಬಿಳಿ ಚುಕ್ಕೆ

ಎಷ್ಟು ಕರೆದರು
ನಿರ್ಭಾವುಕ ಚಂದ್ರ
ಏನು ಇಲ್ಲ

ಸುತ್ತಲು ತಾರೆಯರಿದ್ದಾರೆ
ಧಿಮಾಕು ನಿನಗೆ
ನಗುವುದೊಂದೇ ಗೊತ್ತು ಅವಕ್ಕೆ
ನನ್ನಂತೆ ಮುದ್ದಿಸಲಾರು!


-ಹರವು ಸ್ಫೂರ್ತಿಗೌಡ

ಭಾನುವಾರ, ಮಾರ್ಚ್ 24, 2013

ಕಾವಿಗೆ ಬೇಕು ಸರ್ವಥಾ

ವಿರಹ ಬೆಂಕಿ ಹತ್ತಿ
ಉರಿದು ಪ್ರೀತಿಧಾರೆ
ಅರಿಯುವ ವೇಳೆಗೆ
ಪ್ರಣಯದ ಉರಿ ನಿಲ್ಲಿಸಿದೆ
ಕಾದು ಕುದಿದು ಮರಳಿದ
ವಿರಹ ತಣ್ಣಗಾಗದು
ಸುಟ್ಟಿತು
ಹೃದಯ ಬಾಣಲೆ!
ಬೂದಿಯಾಗಿ ಹಾರಿ
ಗಾಳಿಯಲ್ಲಿ ಲೀನವಾಗದೆ
ಮೈಕಾವೇರಿಸುತ್ತಿದೆ
ಕಾಡಿಸುತ್ತಿದೆ
ನಿಲ್ಲದ ಜ್ವರದಂತೆ

-ಹರವು ಸ್ಫೂರ್ತಿಗೌಡ

ಶನಿವಾರ, ಮಾರ್ಚ್ 23, 2013

ಮಾತು ನೀನು..ಮೌನ ನಾನು

ಮಾತಾಡ್ತೀಯಾ ಸಮೃದ್ಧಿಯಾಗಿ
ಮಾತಾಡ್ತಾನೇ ಇರ್ತಿಯಾ
ನಾನಂತು ಇಲ್ಲಿ ಮೌನ ಗೌರಿ
ನನ್ನ ಮಾತನ್ನು ಮರೆಸುವಷ್ಟು ಮಾತು
ತುಟಿ ಬಿರಿದು ನಗುವಾಗುತ್ತಿಯಾ
ಹೃದಯ ಕಟ್ಟೆ ಒಡೆಸಿ
ಕಲ್ಲಾದ ಭಾವ ಹರಿಸ್ತಿಯಾ
ಆದರೂ ನಾನಂತು ಇಲ್ಲಿ ಮೌನ ಗೌರಿ
ಆಸೆ, ಕನಸು, ಭವಿಷ್ಯಗಳ
ವಿನಿಮಯ, ವಿಚಾರ ಸಂಕಿರಣ
ರೇಗಿಸಿ ಕೆಂಪೇರಿಸ್ತಿಯಾ
ಅಳುಕಿದರೆ
ಹೆಣ್ಣೆದೆ ನೋವಾಯಿತೇನೋ?
ಮರುಗುತ್ತಿಯಾ!
ಆದರೆ ನಾನಂತು ಇಲ್ಲಿ ಮೌನ ಗೌರಿ
ಮಾತು ಕಸಿದುಕೊಂಡನು
ಯಾವತ್ತೋ ಇತ್ತ ಮೌನ ಉಡುಗೊರೆಯ
ಎಂದಿಗೂ ನಾನು ಮೌನ ಗೌರಿ..

-ಹರವು ಸ್ಫೂರ್ತಿಗೌಡ
ಭವಿಷ್ಯ ಬದಲಿಸಿ

ತಿರುಗಿಸಿ ಮುರುಗಿಸಿ ನೋಡಿರೋ
ಒಂದೇ ಹಣೆ ಬರಹ
ಭೂತದ ಭಯಕೋ
ಭವಿಷ್ಯದ ಆತಂಕ್ಕಕೋ
ಶೇರು ಸೂಚ್ಯಂಕವಾಗಬಾರದೇ..
ಎಷ್ಟು ಸಾರಿ ನೋಡಿದರು
ಬದಲಾಗುತ್ತಿಲ್ಲ ಭವಿಷ್ಯ
ಅದೇ ಮೇಷ, ವೃಷಭ, ಸಿಂಹ
ಅದೇ ಯೋಗ, ಅದೇ ಗ್ರಹಚಾರ
ಚೀರಿದೇ.. ಬದಲಿಸಿ ಭವಿಷ್ಯ
ಕಂಡುಕೊಳ್ಳಿ ಭವಿಷ್ಯವ
ಕಾಯಕದಲ್ಲಿ
ಯಾರೂ ಉಲಿದಿದ್ದರು ಶಾಂತೆಯಂತೆ

-ಹರವು ಸ್ಫೂರ್ತಿಗೌಡ