ಶುಕ್ರವಾರ, ಡಿಸೆಂಬರ್ 9, 2011

'ಪ್ರೀತಿ ಸಂಭ್ರಮ'

ಸಂತೋಷ ಸೂರ್ಯ ಅರಳಿ
ಋತುಮಾನ ರಂಗು ತುಂಬಿ
ಮುಗಿಲ ತುಂಬ ಹಕ್ಕಿ ಹರಡಿ
ಎಲೆ ಚಿಗುರು ನಾಚಿ ಮಿನುಗಿ
ನೀಲಿ ಹೂ ಮೈ ಮುರಿದು ಅರಳಿ
ನೀರಲ್ಲಿ ಮೀನು ಅಲೆ ಮೇಲೆ ಈಜಿ
ಮರ ಸುತ್ತಿ ತಬ್ಬಿ ಬಳ್ಳಿ ಬಳುಕಿ
ಮಿಂಚೊಂದು ಕಣ್ಣಿನ ಹೋಳಪ್ಪಲ್ಲಿ ಗುಡುಗಿ
ಆಕಾಶದಿಂದ ಕಾಮನಬಿಲ್ಲು ಬಾಗಿ
ಮಳೆ ಹನಿ ಭೂಮಿಗೆ ಮುತ್ತಿಟ್ಟು
ಸದ್ದಲ್ಲಿ  ಮಣ್ಣ ಕಂಪು ಹರಡಿ
ಜಾಜಿ ಪರಿಮಳದಲ್ಲಿ ಕರಗಿ
ಗಾಳಿಯಲ್ಲಿ ಬೇರತು ಲೀನಾವಾಗಿ
ನವಿಲೊಂದು ರಕ್ಕೆ ತೆರೆದು
ನಲಿದು ರಮಿಸಿ, ಕುಣಿದು
ಮನಸ್ಸಿನ ಮಾತುಗಳು ಪಿಸುಗುಟ್ಟಿ
ಕನಸಲ್ಲಿ ಮರೆಯದ ಹಾಡಾಗಿ
ಸಂಭ್ರಮದ ಪ್ರೀತಿ ಕರೆಯುತ್ತಿದೆ.

-ಹರವು ಸ್ಫೂರ್ತಿಗೌಡ
ಬೇಕು ಕಾರಣ!
ಬರುವಾಗ ಕಾರಣ ಹೇಳಲಿಲ್ಲ
ಹೋಗುವಾಗ ಕಾರಣ ಹೇಳಲಿಲ್ಲ
ತುಂಬಾ ಕಾಡುತಿಹುದು ಕಾರಣಗಳು
ಉತ್ತರವಿಲ್ಲದೆ...
ಸಂಬಂಧಗಳೆ ಹೀಗೆನೋ

ಯಾವುದರ ಗೋಜಿಲ್ಲದೆ
ಹಾರೊ ಹಕ್ಕಿ ಮನಸ್ಸು
ಇಂದು ಗೂಡಲೇ ಬಂಧಿ
ಹಾರುವ ಹುಮ್ಮಸಿಲ್ಲ

ಕಾರಣಗಳು ಬೇಕಿಲ್ಲ
ಎನ್ನಬಹುದು
ಆದರೆ ಕಾರಣ ಇಲ್ಲದೆ
ಮಳೆ ಮುದ್ದು ಕರೆದು
ಭೂಮಿಯಲ್ಲಿ ಕರಗುತಿರಲಿಲ್ಲ
ಯಾವ ಸಂಭ್ರಮವಿಲ್ಲದೇ ಗಾಳಿ
ಹೂವಿನ ಕೆನ್ನೆ ಸವರಿ
ಪರಾಗ ಮಾಡುತ್ತಿರಲಿಲ್ಲ
ಕಡಲು ಉಕ್ಕಿ ಬೆಳದಿಂಗಳ
ರಾತ್ರಿಗಳಲ್ಲಿ ವಿರಹ ಕರೆಯುತ್ತಿರಲಿಲ್ಲ
ಯಾರು ಬರುವರೆಂದು
ಇನ್ನು ಕಾಯುತ್ತಿದ್ದಾಳೆ
ಯಮುನಾ ತೀರದಲ್ಲಿ ರಾಧೆ?

ಮೊದಲ ದಿನದ ಮಾತು
ಇಂದು ಮೌನವಾಯಿತೇ
ಕಾರಣವಿಲ್ಲದೆ?

-ಹರವು ಸ್ಫೂರ್ತಿಗೌಡ
 'ನಶೆ'
ಒಲವಿನ ಕಿರಣ ಬೀರಿ
ಎದೆ ನೆಲದ ಕೃಷಿಯಾಗಿ
ಮೊಳೆಯುವುದೆಂತೋ 
ಪ್ರೀತಿ ಮೊಳಕೆ
ನಂಬಿಕೆ ಮಣ್ಣಿನ ಕಂಪಿಲ್ಲದೆ?

ಕಹಿ ನೆನಪು ಹಗಳಿರುಳು ಕಾಡಿ
ಎದೆ ಆಸೆ ಏನೆಂದು ಕೆದಕಿ
ಯಾವುದೊಂದೊ ಹುಚ್ಚು 'ನಶೆ'
ಒಳ ಪ್ರೀತಿ ಬಣ್ಣ ತೆರಿಸಿ
ಎದೆಯಲ್ಲಿ ರಮಿಸುತ್ತಿದೆ

ಕನಸಿನ ಕಲ್ಪನೆಗಳೆಲ್ಲ
ಕಣ್ಣಲ್ಲಿ ಸೆರೆ ನಿಂತಿದೆ
ಎಂತದೋ ಹನಿ ಕೆನ್ನೆ ತೊಯ್ದು
ಕನಸಿನ ಸೆರೆ ಬಿಚ್ಚಿತು
ರೆಕ್ಕೆಯಿಲ್ಲದ ಕನವುಗಳು 
ಕಣ್ಮುಂದೆ ಆದವು
ನೂರು ಚೂರು!

-ಹರವು ಸ್ಫೂರ್ತಿಗೌಡ
ಏನು ಮಾಡೋದು ಗೊತಿಲ್ಲ?
ಮಾಗುತಿದೆ ಮನಸು 
ನಗುತಿದೆ ಸುಮ್ಮನೆ
ನಿನ್ನ ನೇರ ದೃಷ್ಠಿಯಲಿ
ಕರಗಿ ಹೋಯ್ತು ಕಾಡಿಗೆ!
ನೆಲ ನೋಡಿದೆ ಕಣ್ಣು ಸಂಕೋಚದಿ
ಹೇಳದಂತಾ ಮಾತಿದೆ
ಮರೆ ಮಾಡಲೇ...
ಹುಸಿ ಕೋಪದೊಂದಿಗೆ?

ಹೃದಯ ಹೆದರಿದೆ
ಬಯಸಲು ನಿನ್ನನ್ನು
ಕೊಂದಲದ ನಾಚಿಕೆ
ಬುದ್ಧಿಯಲಿದೆ ನನಗೆ
ರಚ್ಚೆ ಹಿಡಿಯುತಿರುವೆ ಸುಮ್ಮನೆ
ಹಲ್ಲು ಕಚ್ಚುತಿರುವ
ಮನವ ಕೊಟ್ಟು ಬಿಡಲೇ

ಸಂಜೆ ಬಿಸಿಲ ತಾಪ
ಮೈ ಏರಿದೆ
ಎರಡು ಕೈ ಸಾಲದು
ಮುಖ ಮಾರೆ ಮಾಚಲು
ನಿನ್ನೆದೆಗೆ ಒರಗಿ ಮುಚ್ಚಿಡಲೇ

ತುಂಟತನವ ಬಿಡಲೇ
ಗಂಭೀರವಾಗಿ ಪ್ರೀತಿಸಿ ನೋಡಲೇ?!!

-ಹರವು ಸ್ಫೂರ್ತಿಗೌಡ

ಸೋಮವಾರ, ನವೆಂಬರ್ 21, 2011

ನನ್ನ ಮನ!
ಮನದಲೇ  ಪಿಸುಗುಟ್ಟಿದ ಮಾತು
ಕೇಳಲಿಲ್ಲವೇ?
ಮನಸು ಕೇಳಿದವನಿಗೆ
ಕೊಡಲಿ ಹೇಗೆ ನನಗೇ ಅರ್ಥವಾಗದ
ಈ ಮನವ!
ತಿಳಿಯುವ ಮುನ್ನ ನಿನ್ನಲೇ
ಸೇರಿತೆ ಈ ಜೀವ
ದೂರ ಸರಿಯಲೇ ನೀ
ತಿರುಗಿ ನೋಡುವ ಮುನ್ನ
ಒಂದೇ ಭಯ ಒಂಟಿಯಾಗಿ
ಹೋಗ ಬೇಕಿದೆ
ಖಾಲಿ ದಾರಿಯ ಮೇಲೆ
ನೀನಿಲ್ಲದೆ ಈ ವಿರಹ
ಇನ್ನೂ ಚೆಂದ, ದೂರದಿಂದ
ಸಲ್ಲಾಪವೆಲ್ಲ ಹಳೆಯದೆನಿಸಿದೆ
ಬೇರೆ ಏನೋ ಹೇಳ ಬೇಕಿದೆ
ಗೊಂದಲವೋ? ಸ್ಪಂದನವೋ?
ಮನಸ್ಸಿನ  ಏಳಸುತನವೋ
ಬೇಕು ಏನಿಸಿದರೆ ಈಗಲೇ ಬೇಕು
ಆದರೆ.........
ಇಲ್ಲ ಬೇಡ ಯಾವಾಗಲು ಬೇಡ
ಏನೋ ಗೊತಿಲ್ಲ
ಅರ್ಥ ತಿಳಿಯುವ ಮುನ್ನ
ಪ್ರಶ್ನೆ ಮರೆತು ಹೋಗುತ್ತಿದೆ
ಕನಸಿನಲ್ಲಿ ಕಂಡರು ಕೇಳ ಬೇಡ
ಉತ್ತರವಿಲ್ಲದ ಪಶ್ನೆ ನನ್ನದು
ನೆನಪಿನ ರಾಶಿಯಲ್ಲಿ 
ಕಳೆದು ಹೋಗಿದೆ 
ನನ್ನ ಮನ!
ಕಡಲಂಚಿನಲ್ಲಿ  ಮುಳುಗಿದ
ನೇಸರ ಕೇಳಿಸಿತಾ???

-ಹರವು ಸ್ಫೂರ್ತಿಗೌಡ

ಶನಿವಾರ, ಅಕ್ಟೋಬರ್ 22, 2011

ಸೂಳೆ!!!
ಅವಳ ಅಪ್ಪ ಮಾರಿದ
ಮೈನೆರೆಯದ ಹೆಣ್ಣ
ಬಾಳ ದೀಪ ಬೆಳಗುವ ಕೈ
ಹಾರಿಸುತ್ತಿದೆ, ನಿತ್ಯ ಹತ್ತುವ
ಕೆಂಪು ದೀಪ!

ಸೆರಗೆಳೆದ ರಮ್ ನ ರಭಸದಲ್ಲಿ
ಬಿಚ್ಚಿತೊ, ಬಿಕ್ಕಟ್ಟಿತೋ?
ಗೊತಾದ್ದದು ಕತ್ತಲೊಳ ಕಣ್ಣಿಗೆ
ಅವಳಯಾವ ಪರಿಮಳವಿಲ್ಲ
ಅವನನ್ನು ಅಮಲಿನಲ್ಲಿ ತೇಲಿಸಲು

ನೀ ಹೆಣ್ಣು ಅನುಭವಿಸು
ನೀನು ಬೇಡದ ಸುಖವ
ಅವ ಗಂಡು ಮೆಟ್ಟಿ ನಿಂತು
ಪಡೆಯುತ್ತಾನೆ ಬೇಕಾದ ಸುಖವ

ಬಿಚ್ಚಿದ ಮೈ ಹೆಣ್ಣೇ
ಮನಸ್ಸಿನ ಕೂಗನೇಕೆ ಬಿಚ್ಚಲ್ಲಿಲ?
ಶತಮಾನಗಳಿಂದ ನಿನ್ನ
ನಿಲ್ಲಿಸಿದ್ದಾರೆ ಬೆತ್ತಲೆ
ಮಹಾತ್ಮನಂತೆ!
ನಿನ್ನ ನಗುವಿನ ವ್ಯಾಪಾರ ನಡೆದ್ದಿದೆ
ಒಂದು ರಾತ್ರಿಗೆ ನೂರೂಪಾಯಿ
ಬರ್ತಿಯಾ???

-ಹರವು ಸ್ಫೂರ್ತಿಗೌಡ