ಭಾನುವಾರ, ಅಕ್ಟೋಬರ್ 20, 2013

ಬೆಸೆದ ಕೈಗಳು ಬೆಚ್ಚಗಾಗಿ ಹೋಗಿವೆ
ಬೆರಳುಗಳು ಉಬ್ಬಿ ಮತ್ತಷ್ಟು ಮೆತ್ತಗೆ
ತುಟಿಗೆ ಒತ್ತಿ ಬಂಧಿಸಿದೆ
ಬಿಸಿ ಉಸಿರಿಗೆ ತಣ್ಣಗೆ ನಡುಗುವ ಬೆರಳ ತುದಿಯ
ತಲೆಬಾಗಿ ಹಸ್ತದೊಳಗೆ ಮಡಚಿಕೊಂಡವು
ಬಿಡಿಸಿಕೊಳ್ಳಲಾಗಲಿಲ್ಲ, ಕೆಂಪಾದವು
ಹಿಡಿತಕ್ಕೆ ರಕ್ತವೆಲ್ಲಾ ಹಸ್ತಕ್ಕೆ ತುಂಬಿ
ರೇಖೆಗಳು ನಾಚಿ ಭವಿಷ್ಯ ಬರೆಯಲಿವೆ
ನನ್ನ-ನಿನ್ನ ತಬ್ಬಿದ ಕೈಗಳು ಈ ರಾತ್ರಿಯಲಿ
ಹೊಸ ಕನಸು ಕೊಡುವಂತೆ ಹೀಗೆ ಇರಲೆಂದು
-ಹರವು ಸ್ಫೂರ್ತಿಗೌಡ
11-10-2013(11.42 pm)
ತೊಯ್ದು ಬೆವರಿದ ನಾವು

ಜೋರು ಮಳೆ ಖುಷಿ
ನೆನೆದು
ನಿನ್ನೆದುರು ನಿಂತೆ
ನಾನು ತೊಯ್ದೆ
ನೀನು ಬೆವತೆ

-ಹರವು ಸ್ಫೂರ್ತಿಗೌಡ
(ಟೈಮು.....ನಿನ್ನದೇ ಸಂಜೆ)

ಶನಿವಾರ, ಅಕ್ಟೋಬರ್ 12, 2013

ಕ್ಷಮೀಸಲು ನಾನೇನು..

1.
ಬಿಗಿದು ಉಸಿರು ಹಿಡಿದಿಡಲಿಲ್ಲ
ಕ್ಷಣಗಳು ಅಲ್ಲೇ ನಿಲ್ಲಲು ಕಾದಿದ್ದೆ
ತಬ್ಬಿ ಕೋಪದ ಹಿಮ ಕರಗಿಸದೆ
ಕೊರೆವ ಪಾದಗಳಿಗೆ ಕಣ್ಣೊತ್ತಿ
ಬಿಸಿ ಕಣ್ಣೀರು ಹನಿಸಿ ಬಿಟ್ಟೆ
ತಲೆ ಎತ್ತಿ ನೋಡಲೇ ಇಲ್ಲ
ತೆರದುಕೊಂಡ ಕೈಗಳ
ತಬ್ಬಲು ಹಾತೋರೆದ ಹೃದಯವ
2.
ಮುತ್ತನಿಟ್ಟು ಜೋಗುಳ ಹಾಡಬೇಕಿತ್ತು
ನಿನ್ನದೇ ಕನಸು ಕಾಣುವ ಕಣ್ಣುಗಳಿಗೆ
ಕ್ಷಮೆ ಕೇಳಬಹುದಿತ್ತು
ನಿನ್ನ ಪ್ರೀತಿಯ ಮುಂದೆ
ಮುನಿಸು ಗಟ್ಟಿಯಾಗುತ್ತಿರಲ್ಲಿಲ್ಲ
3.
ಕೇಳಿದವರಿಗೆಲ್ಲ ನಗುವಿನ ಉತ್ತರ ಕೊಟ್ಟೆ
ನಾನು ಗಮನಿಸಿದೆ, ನಗುವೂ ತೀವ್ರವಾಗಿತ್ತು
ತುಸು ಹೆಚ್ಚು ಅನಿಸುವಷ್ಟು ತೀವ್ರತೆ!
ಕ್ಷಮಿಸಲಿಲ್ಲ ಅನ್ನುವುದೇ ನಿನ್ನ ದೂರು
ಕ್ಷಮಿಸಲು ನಾನೇನು?
4.
ಮಾತು ಮುಗಿಯೋದಿಲ್ಲ
ನಿಲ್ಲಿಸಬೇಕೆನಿಸಿದರೆ ನಿಲ್ಲಿಸು
ಮತ್ತೆ ಬದಲಾವಣೆಗಳಿಲ್ಲ ನನ್ನಲ್ಲಿ
ಹೊಸದಾಗಿ ನಿರಾಶೆಗೊಳ್ಳಲು
ಎಂದಿಗೂ ಕೈಗೆ ಸಿಗದ ಮೀನೇ
-ಹರವು ಸ್ಫೂರ್ತಿಗೌಡ

ಶುಕ್ರವಾರ, ಅಕ್ಟೋಬರ್ 4, 2013

ಮೈಮರೆವ ಪ್ರೀತಿ ತನ್ನನೇ ಮರೆಸಿತು ಶಕುಂತಳ
ಬೆರಳಿಗಿಟ್ಟ ಉಂಗುರ ಕಳೆದುಕೊಂಡರೆ ಮರೆತುಬಿಡುವುದೇ

ವಂಶೋಧರದ ಸಂಸ್ಕಾರಕ್ಕೆ ನಿಯೋಗದ ಪಾಂಡವರು
ಕುಂತಿಯ ಪಾವಿತ್ರ್ಯತೆ ಪ್ರಶ್ನಿಸಿದನ ಕೈಲಾಗದ ಪಾಂಡು

ಕಣ್ಣಿಗೆ ಬಿದ್ದ ಕಾಮ ಕಂಡು ಕಾಲ್ಲಾದಳೇ ಅಹಲ್ಯೆ
ಪುರುಷೋತ್ತಮನ ಕಾಲ್ಧೂಳು ಬೇಕಾಯಿತೇ ಕಲ್ಲಿಂದರಳಲು

ಎಂಜಲು ಹಣ್ಣು ನೈವೇದ್ಯ ಕೊಟ್ಟ ಭಕ್ತಿ ಕಂಡನೇ
ಕಾಣಲಿಲ್ಲ ರಾಮಗೆ ಕಾಯಿಸಿ ಹಣ್ಣಾಗಿಸಿದ ಶಬರಿಯ

ಆಯ್ಯೋ ಜಾನಕಿ ಕಥೆ ಕೇಳಬೇಡಿರಮ್ಮ ಭೂಗತವಾದಳು
ಏಕಪತ್ನಿವತ್ರಸ್ಥನಾಗಲು ಶಂಕಿಸಿ, ಸುಡಿಸಿ, ಮಣ್ಣುಮಾಡಿದ

ಇಂದಿಗೆ ಶಕುಂತಲ, ಕುಂತಿ, ಅಹಲ್ಯೆ, ಶಬರಿ, ಸೀತೆ ಬುದ್ಧಿವಂತೆಯರಾದರೇ?
ಹೆಣ್ಣ ಮಾಯೆಗೆ, ಅವಳ ವಾಂಛೆಗೆ ಬಲಿಯದೆ ಬದಲಾಗದವನಾದನೆ?

-ಹರವು ಸ್ಫೂರ್ತಿಗೌಡ
30-09-2013 (1.11pm)