ಶನಿವಾರ, ಅಕ್ಟೋಬರ್ 12, 2013

ಕ್ಷಮೀಸಲು ನಾನೇನು..

1.
ಬಿಗಿದು ಉಸಿರು ಹಿಡಿದಿಡಲಿಲ್ಲ
ಕ್ಷಣಗಳು ಅಲ್ಲೇ ನಿಲ್ಲಲು ಕಾದಿದ್ದೆ
ತಬ್ಬಿ ಕೋಪದ ಹಿಮ ಕರಗಿಸದೆ
ಕೊರೆವ ಪಾದಗಳಿಗೆ ಕಣ್ಣೊತ್ತಿ
ಬಿಸಿ ಕಣ್ಣೀರು ಹನಿಸಿ ಬಿಟ್ಟೆ
ತಲೆ ಎತ್ತಿ ನೋಡಲೇ ಇಲ್ಲ
ತೆರದುಕೊಂಡ ಕೈಗಳ
ತಬ್ಬಲು ಹಾತೋರೆದ ಹೃದಯವ
2.
ಮುತ್ತನಿಟ್ಟು ಜೋಗುಳ ಹಾಡಬೇಕಿತ್ತು
ನಿನ್ನದೇ ಕನಸು ಕಾಣುವ ಕಣ್ಣುಗಳಿಗೆ
ಕ್ಷಮೆ ಕೇಳಬಹುದಿತ್ತು
ನಿನ್ನ ಪ್ರೀತಿಯ ಮುಂದೆ
ಮುನಿಸು ಗಟ್ಟಿಯಾಗುತ್ತಿರಲ್ಲಿಲ್ಲ
3.
ಕೇಳಿದವರಿಗೆಲ್ಲ ನಗುವಿನ ಉತ್ತರ ಕೊಟ್ಟೆ
ನಾನು ಗಮನಿಸಿದೆ, ನಗುವೂ ತೀವ್ರವಾಗಿತ್ತು
ತುಸು ಹೆಚ್ಚು ಅನಿಸುವಷ್ಟು ತೀವ್ರತೆ!
ಕ್ಷಮಿಸಲಿಲ್ಲ ಅನ್ನುವುದೇ ನಿನ್ನ ದೂರು
ಕ್ಷಮಿಸಲು ನಾನೇನು?
4.
ಮಾತು ಮುಗಿಯೋದಿಲ್ಲ
ನಿಲ್ಲಿಸಬೇಕೆನಿಸಿದರೆ ನಿಲ್ಲಿಸು
ಮತ್ತೆ ಬದಲಾವಣೆಗಳಿಲ್ಲ ನನ್ನಲ್ಲಿ
ಹೊಸದಾಗಿ ನಿರಾಶೆಗೊಳ್ಳಲು
ಎಂದಿಗೂ ಕೈಗೆ ಸಿಗದ ಮೀನೇ
-ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ