ಮಂಗಳವಾರ, ಜುಲೈ 9, 2013

ಹಕ್ಕಿ, ಕಪ್ಪೆ ತಿಂದ ಬೆಕ್ಕು

ನಿದ್ರೆಯಲ್ಲಿ  ಕುತ್ತಿಗೆ ಬಿಗಿದಂತೆ
ಉಸಿರುಗಟ್ಟಿಸುವ ದೀಢಿರ್ ಭಾವಗಳು
ಉಕ್ಕುವ ಹರೆಯದ ಮನೋಭಿಲಾಷೆ
ಸುಳುಹುಗಳಿಗಾಗಿ ಮೇಲೆ ಕೆಳಗೆ
ಸುತ್ತಮುತ್ತ ವ್ಯರ್ಥ ಶೋಧಿಸುತ್ತಾ
ಆಸರೆ, ಅಕ್ಕರೆ ಹುಡುಕುವಾಗ ಮಧ್ಯರಾತ್ರಿ
ಅವ್ಯಚಿರಸ್ಥಿತ ವಿವರಗಳಿಗಾಗಿ
ಕೈಲಾಗದ ಪುರುಷತ್ವ ಕೆರಳಿಸುತ್ತಾ..


ಹಳದಿ ಅನುಮಾನದ ಕಣ್ಣು
ಒಗೆದಷ್ಟು ಕೊಳೆ ಕರವಸ್ತ್ರಗಳಲ್ಲಿ ಹಳದಿ ಉಳಿದಂತೆ
ಕೊಚ್ಚೆನೀರಿನ ತೊಟ್ಟಿಯಲ್ಲಿ ಮುಳುಗಿದ
ಕೊಳಕಾದ ಎಂಜಲು ತಟ್ಟೆಯಾಗಿ ಬಂದಿದ್ದಾನೆ
ಎಷ್ಟುಕೊಟ್ಟು ಉಂಡನೋ, ತಿಂದನೋ
ತೇಗಿ ನನ್ನೆದೆಯ ಮೇಲೆ ವಿಶ್ರಾಂತಿ
ತೆರೆದುಕೊಂಡ ಸಕ್ಕರೆ ಭರಣಿಯಿಂದ ಮಲ್ಲನೆ
ಇರುವೆ ಹೆಜ್ಜೆ ಸಪಳ ಕಿವಿ ಕಚ್ಚುವಾಗ
ಮುರಿದ ಹಕ್ಕಿಗೂಡಿನ ಮನಬಾಗಿಲ ತುದಿ
ಮಡಿಲ ಮಗುವಿಗಾಗಿ ಕೊಂಡಿ ಸಣ್ಣಗೆ ಇನ್ನೂ ಅಂಟಿಕೊಂಡಿದೆ


ಹಕ್ಕಿ ಹುಚ್ಚು ಅನುಮಾಗಳ ಹಿಂದೆ ಬೆಕ್ಕ ನಗು
ಹೊಲಿದುಕೊಂಡ ಎಷ್ಟೋ ಸಂಬಂಧಗಳು ಕಂಡವು
ಹೊಲಿಗೆ ಹಿಂದೆ ನೋವುಗಳು ಕಂಡವು
ಪ್ರತಿ ಸಂಬಂಧಗಳು ಸೂಜಿ ಚುಚ್ಚಿದಂತೆ
ಒಳಗಾಗುವ ಹಿಂಸೆ ದಬ್ಬಾಳಿಕೆಗಳು
ಲಗ್ನಕೊಂಡದ ಬೆಂಕಿಯಂತೆ ಧಗಿಸಿದವು
ನಿರೀಕ್ಷೆಗಳಿಗೆ ವ್ಯತಿರಿಕ್ತವಾಗಿ ವರ್ತಿಸುವುದು ಪುರುಷ ಪ್ರಭುತ್ವ
ಹಕ್ಕಿಯಂತೆ ಮನೆಯಲ್ಲೇ ಗುಮ್ಮಗೆ ಕುಳಿತ ಮಡದಿ ಮುಂದೆ
ಕಪ್ಪೆತಿಂದ ಲೋಭಿ ಗಂಡು ಬೆಕ್ಕಂತಾದ

-ಹರವು ಸ್ಫೂರ್ತಿಗೌಡ
9-07-2013(6.29)

1 ಕಾಮೆಂಟ್‌: