ಸೋಮವಾರ, ಜುಲೈ 8, 2013



ಕೂದಲ ಮೇಲೆ ಪ್ರೀತಿ ಅವನಿಗೆ

ಬೆಟ್ಟದ ಬೆಳದಿಂಗಳಂತೆ ದಿನವಿಡೀ ಪಕ್ಕ ಕುಳಿತ ಅವಳು
ಹಾರಿದ ಕೂದಲು ಅವನ ಮುಖವರೆಸಿ, ಉಸಿರ ಮೆತ್ತಿಕೊಂಡು
ಪುನಃ ಸುರಳಿ ಸುತ್ತಿ ಕತ್ತುಗಳಿಗೆ ಅವನುಸಿರ ತಲುಪಿಸಿ ಎದೆಗಿಳಿದವು
ಕುತ್ತಿಗೆ ಬಿಡಾರ ಸೇರಿದ್ದು ಅವನು ಮುತ್ತಿಟ್ಟು ಎಂಜಲು ಕೂದಲುಗಳೇ

ನಯನಾಜುಕು ಇಲ್ಲದ ಚೆಲ್ಲು ಬುದ್ಧಿ ಕೂದಲು
ಎಂದೂ ಕಿವಿಯ ಹಿಂದೆ, ಗಂಟಿನೊಳಗೆ ಸೇರಿಲ್ಲ
ಎಷ್ಟೇ ಬಿಗಿದು ಕಟ್ಟಿದರು ಗಂಭೀರ ಕಲಿಯಲ್ಲಿಲ
ಬಿಸಿ ತುದಿಬೆರಳಿಂದ ಅಣೆತಾಗಿಸುತ್ತಾ ಒಂದೆಳೆ ಬಿಡಿಸಿಹೋದರೆ
ಇವುಗಳಿಗೆ ಸ್ವತಂತ್ರ, ಅವನ ಗುರಾಯಿಸುವಿಕೆಗೆ ತಕ್ಕಂತೆ
ಬಿಚ್ಚಮ್ಮಗಳಾಗಿ ಹಾರಿಕುಣಿದು ಕೆನ್ನೆಗೆ ಬಡಿಯುತ್ತ ಆಟ

ಕೂದಲಿಗೆ ಮೋಹಗೊಂಡಿದ್ದು ಸೀಗೆಯ ಘಮಕ್ಕೆ
ನಿನಗೆದರಿ ಕಿವಿ ಸೇರುವ ಮೋಟು ಮುಂಗುರುಳುಗಳ ಧಿಮಾಕು
ಒದ್ದೆಕೂದಲಿಂದ ನೀರೆಲ್ಲ ಒಂದೊಂದೇ ಹನಿಯಾಗಿ ಇಳಿದು
ತೊಯ್ದ ನೀಳಬೆನ್ನು ಮುಚ್ಚಿಡುವ ಆಕೂದಲ ರಾಶಿ ಅಬ್ಬಾ!!!

ಪ್ರಶ್ನೆ ಕೇಳದೆ ಸಿಕ್ಕ ಉತ್ತರಕ್ಕೆ ತತ್ತರಗೊಂಡರು
ಕನ್ನಡಿ ಮುಂದೆ ನಿಂತಾಗ ಪ್ರತಿ ಎಳೆ ಕೂದಲ್ಲಲು
ಬಿಡಿಸಲಾಗದ ಅವನ ಅಶ್ಚರ್ಯ, ಸೂಜಿಗಗಳ ಗಂಟು
ಇವಕ್ಕೂ ನನಗಿಂತ ಹೆಚ್ಚು ಅವನ ಮೇಲೆ ಆಸೆ
ನಾನು ಬಂಧಿಸುವವಳು, ಅವನು ಸ್ವತಂತ್ರಗೊಳ್ಳಿಸುವವನು
ನಿನ್ನ ಬಿಗಿದು ಕಟ್ಟುವುದೇ ಅವನು ಬಿಡಿಸುವ ಪರಿಗಾಗಿ
ಬಿಡಿಸಿಕೋ, ಹಾರು ಸ್ವತಂತ್ರವಾಗಿ ಅವನ ಆಸೆಯಂತೆ
-ಹರವು ಸ್ಫೂರ್ತಿಗೌಡ
07-07-2013 (6.30 pm)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ