ಭಾನುವಾರ, ಮಾರ್ಚ್ 2, 2014

ನಿನ್ನ ದನಿಯೊಂದು ದಿನ ಹಕ್ಕಿಯ ನಿನಾದವಾಗಲಿದೆ
ರೋಮ ಪುಳಕಗೊಂಡು ಕಣ್ಣುಗಳ ಬೆಳಕು ಬೆತ್ತಲಾಗುತ್ತವೆ
ಚಂದಿರನ ದಿಕ್ಕಿಗೆ ಮುಖಮಾಡಿ ಹೊರಟುಬಿಟ್ಟೆ
ನಿನ್ನ ದಿಗಂತಗಳ ಕೇಳಬೇಕು ನಿಲ್ಲು..
ನಿನ್ನ ಆಲಾಪಗಳು ನನ್ನ ಹೃದಯ ಗೀತೆಯಾಗುತ್ತಿವೆ..
...
ಭ್ರಾಂತಿಯೇನು ನನ್ನ ಪ್ರೀತಿ..?
ಬಯಕೆಗಳ ತೀವ್ರತೆಗೆ ನಿರ್ಲಿಪ್ತ ನಡುರಾತ್ರಿ ನಡೆದೆ
ಆಸೆಗೆ ದುಃಖ ನೀಡಿ ಶಾಂತಿಧೂತನಾಗಿದ್ದು ಹೇಗೆ
ನಿನ್ನ ಪಾಲಿ ಭಾಷೆಗಳು ಗೊತ್ತಿಲ್ಲ ಬಿಡು
ಅನುರಾಗಗಳ ಎಚ್ಚರ ಸ್ಥಿತಿ ಅವಲೋಕಿತ ಧಮ್ಮಗಳು
ಅಸಹನೆ ನಡಿಗೆಗಳು ಸುಳ್ಳಿರಬಹುದು ವೈರಾಗ್ಯವಲ್ಲ
ಜಂಗಮ ಕಾಲುಗಳು ಕಾದ ಹೃದಯಗಳಿಂದ ಸುಡಬೇಕಿದ್ದವು
ಪಾದಗಳೇ ಹಾರುವ ಮುನ್ನ ಕೆಂಡದೂವುಗಳ ಮೇಲೆ ಕೂತುಹೋಗು
ಕಾಲಿಟ್ಟ ಬಂಡೆಯಲ್ಲಿ ಝರಿ ಹರಿಯಿತು
ಪಾದ ಚಿಟ್ಟೆ ಕೂತ ಕೆಂಡದೂವು ಜ್ವಲಿಸಿ ಬೆಳಗಾಯಿತ್ತು
ಎಲ್ಲರೂ ಮಣ್ಣು ಸೇರಿದೆವು; ಉತ್ತಿದಂತೆ ಘಾಸಿಗೊಳ್ಳುತ್ತಿದ್ದೆವು
ಎದೆ ಗಾಯಗಳು ಬೀದಿ ಅಲೆಯುತ್ತ ನಿನ್ನ ಹುಡುಕುತಿವೆ
ನೀನೂ ಮಣ್ಣಾದೆ; ನಿನ್ನ ಎದೆಯನ್ನ ಉಳುತ್ತಿದ್ದಾರೆ
ಉತ್ತಿದೆಂತಲ್ಲಾ ಮೊಳಕೆಯೊಡೆದೆ
ಪ್ರೀತಿ ಆತ್ಮ ಎದೆಯೊಳಗೆ ಇಸಿರಿಕೊಂಡೆದ್ದೆ ಬೋಧಿವೃಕ್ಷವಾಗಿ ಬೆಳೆದೆ
ಸೋಲು, ನೋವುಗಳ ಕಂಡು ತಟಸ್ಥನಾಗಿ ಅರೆಗಣ್ಣ ನಗುವೇಕೆ
ಬಾಯಿಬಿಟ್ಟು ಹೇಳಿದರೆ ಬರಿ ಸದ್ದಷ್ಟೇ ಕೇಳುತ್ತಿದೆ
ಭಾವರ್ಥಗಳ ಹೂ ಬಿರಿದು ಘಮ್ಮೆಂದದ್ದು ಸೊಕದೆ ಹೊಯ್ತು
ನಿನ್ನಷ್ಟೇ ಪ್ರೀತಿಸಿ ಭಗ್ನಳಾದೆ, ನೀ ಜಗತ್ತನೇ ಪ್ರೀತಿಸಿ ಬುದ್ಧನಾದೆ

ಬೆಳಗಾಯಿತು,
ನನ್ನದಷ್ಟೇಯಲ್ಲ ಎಲ್ಲಾ ವಿರಹಿಗಳ ರೆಕ್ಕೆ ಬಿಚ್ಚಿವೆ
ನಿನ್ನ ದಿಗಂತಗಳ ಕೇಳಬೇಕು, ನಿಲ್ಲು..
ನಿನ್ನ ಆಲಾಪಗಳು ನಮ್ಮೆಲ್ಲರ ಹೃದಯ ಗೀತೆಯಾಗುತ್ತಿವೆ..
-ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ