ಭಾನುವಾರ, ಮಾರ್ಚ್ 2, 2014

ಈಜಬೇಕು ನೀಳ ಬೆನ್ನಲ್ಲಿ
1.
ನಿನ್ನ ನೀಳ ಬೆನ್ನಲ್ಲಿ ಈಜಬೇಕು
ಮೈಚಳಿ ಬಿಟ್ಟು ಆಳಕ್ಕೆ ಕುಸಿಯುತ
ಮುತ್ತು, ಹವಳ ನಿಧಿ ಹುಡುಕುವಂತೆ
ಭೋರ್ಗರೆವ ಯವ್ವನಕ್ಕೆ ಸಿಲುಕಿ ನಲುಗಲು
2.
ನಿನ್ನ ನೀಳ ಬೆನ್ನಲ್ಲಿ ಗಾಳಹಾಕಿ ಕೂರಬೇಕು
ಹೊಸ ನೀರ ಸ್ರವಿಸು, ಹಳೆ ಮೀನು ಸಿಗಲಿ
ಒಕ್ಕಳು ಸುಳಿ ಸೆಡುವುಗಳಲ್ಲಿ ಗುದ್ದಾಡಲು...
ಆಳ ಸೆಳತ ಏರಿಳಿತಗಳಿಗೆ ಸಿಕ್ಕಿ ಸೊಲೊಪ್ಪಲು
3.
ನಿನ್ನ ನೀಳ ಬೆನ್ನ ಸೌಂದರ್ಯಕ್ಕೆ ಬೊಗಸೆಯೊಡ್ಡಬೇಕು
ಪ್ರತಿ ಋತುವಿನಲ್ಲೂ ದಂಡೆಯಲ್ಲಿ ಕಾಯುತ
ಬೆಸಿಗೆ ಧಗೆಯಲ್ಲಿ ನಿನ್ನೊಡನೆ ಬೆವರಲು
ಚಳಿಯಲ್ಲಿ ಶಿಥಲೆ ತಳಕ್ಕೆ ಬಿಸಿಹರಿಸಲು
ತೂರಿ ಹರಿವವಳಿಗೆ 'ನಡು'ಬಂಡೆಯಾಗಲು
4.
ಕೊನೆಗೊಂದು ಬಾರಿ ಬಿಟ್ಟುಕೊಳ್ಳೆ
ನಿನ್ನದೇ ನೀಳ ಬೆನ್ನು ಬೇಕು
ಅಪ್ಪನ ನೆನಪಿಗೆ ಕೂಸುಮರಿ ಮಲಗಲಾದರು
-ಹರವು ಸ್ಫೂರ್ತಿಗೌಡ

1 ಕಾಮೆಂಟ್‌: