ಮಂಗಳವಾರ, ಜನವರಿ 7, 2014

ನಿನ್ನ ದೇಹದಲ್ಲಿ; ಅವನ ಆತ್ಮ ಸಿಕ್ಕಾಗ...
 
ಪೆರುವಿನ ಕಾಂಕ್ರೀಟಿನ ಸ್ಮಶಾಣವದು
ಎಲ್ಲಾ ಹೆಣದ ಮೇಲೆ ಉಸಿರು ಬಿಗಿಸಿದ ಗೋರಿಗಳು
ಎದೆ ಮೇಲೆ ಕಲ್ಲೆಳೆದುಕೊಂಡು ಮಲಗಿಬಿಟ್ಟಿವೆ
ತಲೆಬುರುಡೆಗೆ ಕ್ರೈಸ್ತನ ಕಡ್ಡಿ ಸಿಕ್ಕಿಸಿಕೊಂಡು
ಒಣಗೆಲೆ ಕೆರೆದು ಉಗುರು ಸವೆದುಬಿಟ್ಟವು
ಜನನ-ಮರಣ ಇಸುವಿಗಳು; ನಡುವೆ ಬದುಕಿಬಿಟ್ಟಿದ್ದಕ್ಕೆ
ಒಂದೆರೆಡು ದೆವ್ವಗಳು ಸಿಗಬೇಕಿದ್ದವು ಕಷ್ಟಸುಖಕ್ಕೆ
ಹಿಂದಿರುಗಲು ನೆನಪಾದಂತೆ ಮರೆತುಬಿಟ್ಟೆ
ನಿನ್ನ ಹುತ್ತಿಟ್ಟ 3-6ಅಡಿ ಹುಡುಕಲು

ಪೆರುವಿನ ಕಾಂಕ್ರೀಟಿನ ಸ್ಮಶಾಣದಲ್ಲಿದೀಯೇ??
ನನ್ನಣೆಯ ಸಿಂಧೂರ ಪ್ರಶ್ನಿಸುವುದರೊಳಗೆ
ನಿನ್ನೆಣದ ಮಂದೆ ಕಿತ್ತೆಸೆಯಬಹುದಿತ್ತು
ಹೂ, ಬಳೆ, ತಾಳಿ, ಕಾಲುಂಗುರ

ಪೆರುವಿನ ಕಾಂಕ್ರೀಟಿನ ಸ್ಮಶಾಣವದು
ತಲೆ ಚೆಚ್ಚಿಕೊಂಡು ಹುಡುಕುತ್ತಿದ್ದೆ ನಿನ್ನದೊಂದು ಹೆಣವ
ನಿನ್ನ ಕಾಣಲು ಬಂದು ಸಾವಿರಾರು ಕ್ರೈಸ್ತನ ಕಂಡೆ
ಗೂಟ ಹೊಡೆಸಿಕೊಂಡಿದ್ದ ಅಂಗೈ ಮೊಳೆಯ ತುಕ್ಕು
ಬುರುಡೆಗೆ ಸಿಕ್ಕಿಕೊಂಡ ಮುಳ್ಳಿನ ಕಿರೀಟದ ಮೊನಚು
ದೇಹ ಜಗ್ಗಿಸಿ ಬೆನ್ನಿಗೆ ನೇತು ಹಾಕಿಕೊಂಡಿದ್ದ ಶಿಲುಬೆ
ದೇವಪುತ್ರನಿಗೂ ಬೆತ್ತಲೆಯ ಅಂಜಿಕೆಯಾಗುವುದರೊಳಗಿನ ಲಂಗೋಟಿ
ತಲೆ ಎತ್ತದೆ ನೇತಾಡುತ್ತಿದ್ದ; ಸ್ಮಶಾಣವಾಗಲಿ ಆಲಯವಾಗಲಿ
ಪಿತನ ಸುತನ ಮತ್ತು ಪವಿತ್ರಾತ್ಮ ಆತ್ಮದಲ್ಲಿ-ಆಮೆನ್
-ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ